Site icon Ullalavani

ಖಾದರ್ ಕ್ಚೇತ್ರದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆಯೇ ಸರಿಯಿಲ್ಲ: ಸಂತೋಷ್ ರೈ ಬೋಳಿಯಾರ್

UN networks

ತೊಕ್ಕೊಟ್ಟು: ಖಾದರ್ ಅವರ ಕ್ಷೇತ್ರದ ಚೆಂಬುಗುಡ್ಡೆಯ ಸ್ಮಶಾನಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇತ್ತೀಚೆಗೆ ಹೆಣವೊಂದು ರಸ್ತೆ ಅವ್ಯವಸ್ಥೆಯಿಂದ  ಆಂಬ್ಯುಲೆನ್ಸ್ ನಿಂದ  ಹೊರಬೀಳುವುದರಿಂದ ತಪ್ಪಿತ್ತು.  ನಗರೋತ್ಥಾನದಲ್ಲಿ ಅನುದಾನವಿದ್ದರೂ ರಸ್ತೆ ದುರಸ್ತಿಗೆ ಮುಂದಾಗದಿರುವುದು  ವಿಪರ್ಯಾಸ ಎಂದು ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.


 ತೊಕ್ಕೊಟ್ಟು ಕಾಪಿಕಾಡಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬೋಳಿಯಾರ್,  ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಹೆಚ್ಚಿದ್ದರೂ, ಶಾಸಕರು  ನಿಯಂತ್ರಿಸಲು ಅವಿರತವಾಗಿ ದುಡಿಯುತ್ತಿದ್ದಾರೆ.  ಜಿಲ್ಲಾಡಳಿತ ಪೊಲೀಸ್ ಇಲಾಖೆ ಸೇರಿದಂತೆ ಕೊರೊನಾ ವಾರಿಯರ್ ಗಳ ಸೇವೆಯೂ  ಬಹಳಷ್ಟಿದೆ. ಜಿಲ್ಲೆಯ  ಮೂಲೆ ಮೂಲೆಗಳಲ್ಲಿ ಕೋವಿಡ್ ವಾರ್ ರೂಂ  ಪರಿಣಾಮಕಾರಿಯಾಗಿ  ಕಾರ್ಯಚರಿಸಿ ಸೋಂಕಿತರಿಗೆ  ಬೇಕಾದ ಆಸ್ಪತ್ರೆ, ಐಸಿಯು ವನ್ನು ಒದಗಿಸುವಲ್ಲಿ  ಬೆಳಿಗ್ಗೆ 6 ರಿಂದ 9ರ ತನಕ ಕಾರ್ಯಾಚರಿಸುತ್ತಿದೆ.   ಕೆಲಸ ಮಾಡುವುದಕ್ಕಿಂತ ಜಾಸ್ತಿ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್  ಸುದ್ಧಿಗೋಷ್ಠಿಗಳನ್ನು ಮಾಡುತ್ತಿದ್ದಾರೆ.  ಮಂಗಳೂರು ಕ್ಷೇತ್ರ ಬಿಟ್ಟು  ಮಂಗಳೂರು ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ.  ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭ  ವೆನ್ಲಾಕ್ ಆಸ್ಪತ್ರೆಯಲ್ಲಿ 20 ಐಸಿಯು ಬೆಡ್ ಗಳು ಮಾತ್ರವಿತ್ತು. ಇದೀಗ 70  ಆಕ್ಸಿಜನ್ ಬೆಡ್ ಸೇರಿದಂತೆ 250 ಬೆಡ್ ಗಳು ಇವೆ.   ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ರೋಗಿಗಳಿಗೆ 50 ಆಕ್ಸಿಜನ್ ಬೆಡ್ ಗಳಿವೆ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವ ಖಾದರ್ ನಡೆ ವಿರುದ್ಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ಆಸ್ಪತ್ರೆಯನ್ನು ಪರಿಶೀಲನೆ ನಡೆಸಲಾಗಿದೆ.  ಅಲ್ಲಿ ಜಂಬೋ ಆಕ್ಸಿಜನ್ ಸಿಲಿಂಡರುಗಳೇ ಇಲ್ಲ.  ಸರಕಾರಿ, ಖಾಸಗಿ ಆಸ್ಪತ್ರೆಗಳು ಎಲ್ಲಾ ತುಂಬಿದ ಬಳಿಕ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬಹದು  ಅನ್ನುವ ಡೆಮೋ ಮಾತ್ರ ಮಾಡಲಾಗಿದೆ. ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳೆಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಾಸಕರು ಪ್ರಯತ್ನಿಸಲಿ. ಅದಕ್ಕಾಗಿ ರಾಜ್ಯ ಸರಕಾರದಿಂದ ಬೇಕಾದ ಸವಲತ್ತುಗಳನ್ನು ತರಿಸಲು ನಾವೂ ಶಾಸಕರ ಜತೆಗಿರುತ್ತೇವೆ.  ಕೇಂದ್ರ ಸರಕಾರದ ಸಹಕಾರದಿಂದ  ಬಹರೈನ್ ನಿಂದ  ಬಂದಿರುವ 40 ಟನ್ ಆಕ್ಸಿಜನ್ ನಲ್ಲಿ ಜಿಲ್ಲೆಗೆ 10 ಟನ್ ನೀಡಲಾಗಿದೆ.  ಇನ್ನೂ ಆಕ್ಸಿಜನ್ ಕೊರತೆ ಎಂದಾದಲ್ಲಿ ಕೇಂದ್ರ  ಸರಕಾರದ ಗಮನವನ್ನು  ಸೆಳೆಯುತ್ತೇವೆ.  
ನಾಯಿಗಳ ಗೂಡು ಹೆಲ್ತ್ ಕಿಯೋಸ್ಕ್  :
ಶಾಸಕ ಖಾದರ್ ಅವರು  ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಸರಕಾರದ ಅನುದಾನದಿಂದ ಕೋಟ್ಯಂತರ ವ್ಯಯಿಸಿ ಕ್ಷೇತ್ರದ ವಿವಿದೆಡೆ ಹೆಲ್ತ್ ಕಿಯೋಸ್ಕ್ ಸ್ಥಾಪಿಸಿದ್ದಾರೆ. ಆದರೆ  ಯಾವ ಕಿಯೋಸ್ಕ್ ಕೂಡ ಕಾರ್ಯಚರಿಸುತ್ತಿಲ್ಲ. ಹಲವೆಡೆ ಹೆಲ್ತ್ ಕಿಯೋಸ್ಕ್ ಗಳು ನಾಯಿಗಳ ಗೂಡಾಗಿ ಮಾರ್ಪಾಡಾಗಿವೆ.  ಈ ಕುರಿತು ಉಸ್ತುವಾರಿ ಸಚಿವರ ಗಮನಕ್ಕೆ ತಂದು  ಅದನ್ನು ಆರಂಭಿಸಲು ಬೇಕಾದ ಸಹಕಾರವನ್ನು ಮಾಡುತ್ತೇವೆ ಎಂದರು.
ಎರಡನೇ ಅಲೆ  ವ್ಯಾಪಕ : ಜಿಲ್ಲೆಯಲ್ಲೂ ಎರಡನೇ ಅಲೆ ವ್ಯಾಪಕವಾಗುವುದರಲ್ಲಿ ಸಂಶಯವಿಲ್ಲ .  ಮಹಾರಾಷ್ಟ್ರ,  ಬೆಂಗಳೂರು ಭಾಗದವರು ಜ್ವರ ಬಂದ ತಕ್ಷಣ  ಜಿಲ್ಲೆಗೆ ಬಂದಿದ್ದಾರೆ. ಇದರಿಂದ ಸೋಂಕು  ವ್ಯಾಪಕವಾಗಿ ಹರಡುತ್ತಿದೆ.  ಈ ನಿಟ್ಟಿನಲ್ಲಿ ಜನರು ಜಾಗರೂಕರಾಗಿ ಸರಕಾರದ ಕ್ರಮಗಳಿಗೆ ತಲೆಭಾಗಬೇಕು ಎಂದರು.
 ಪ್ರಧಾನಿ ಮೋದಿ ಗರೀಬ್ ಕಲ್ಯಾಣ್ ಯೋಜನೆಯಡಿ ಎರಡು ತಿಂಗಳ  ರೇಷನ್ ಅನ್ನು ಒಂದೇ ತಿಂಗಳಲ್ಲಿ ಪಾವತಿ ಮಾಡಬೇಕು  ಅನ್ನುವ  ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಿದ್ದಾರೆ. ಇದರಿಂದ ಮನೆಯೊಳಗೆ ಐಸೊಲೇಷನ್ , ಪ್ರಾಥಮಿಕ ಸಂಪರ್ಕದಿಂದ ಕ್ವಾರಂಟೈನಿನಲ್ಲಿರುವವರಿಗೆ  ಬಹಳಷ್ಟು ಸಹಕಾರಿಯಾಗಲಿದೆ.
ತನ್ನ ಸ್ವಂತ ಮೂರು ಸಭಾಂಗಣ ಮೀಸಲು : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳು ಸಿಗದೇ, ಕೋವಿಡ್ ಸೆಂಟರುಗಳು ತುಂಬಿದಲ್ಲಿ, ಬೋಳಿಯಾರಿನಲ್ಲಿರುವ ತನ್ನ ಸ್ವಂತ ಮೂರು ಸಭಾಂಗಣಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಸಿದ್ಧ. ಆರೋಗ್ಯ ಇಲಾಖೆ ಅದನ್ನು ಸದುಪಯೋಗಪಡಿಸಬಹುದು. ಅಲ್ಲದೆ ಉಳ್ಳಾಲದಲ್ಲಿ   ಪ್ರಾಕೃತಿಕ ವಿಪತ್ತು ನಿರ್ವಹಣೆಯಡಿ ನಿರ್ಮಾಣವಾಗಿರುವ ಕಟ್ಟಡವನ್ನು  ಕೋವಿಡ್ ಸೆಂಟರಿಗಾಗಿ ಮೀಸಲಿಡಬಹುದು ಎಂದರು.
ಸುದ್ಧಿಗೋಷ್ಠಿಯಲ್ಲಿ  ರಾಜ್ಯ ಅಲೆಮಾರಿ ಅರೆಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,  ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಹಾಗೂ ನವೀನ್ ಪಾದಲ್ಪಾಡಿ, ಬಿಜೆಪಿ ಮಾಧ್ಯಮ ವಿಭಾಗದ ಅಜಿತ್ ಉಳ್ಳಾಲ್ ಹಾಗೂ ಆನಂದ ಶೆಟ್ಟಿ ಉಪಸ್ಥಿತರಿದ್ದರು.

Exit mobile version