UN networks
ಉಳ್ಳಾಲ: ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಮಾನಸಿಕವಾಗಿ ಸದೃಢತೆಯನ್ನು ಕಾಪಾಡಿಕೊಂಡು ಕರ್ತವ್ಯ ನಿಭಾಯಿಸಬೇಕಿದೆ. ಸೋಂಕಿತರು ಸಾಯುವಂತಹ ಪರಿಸ್ಥಿತಿ ಎದುರಾಗಬಾರದು. ವೈಯಕ್ತಿಕ ನಿರ್ಧಾರಗಳಿಂದಲೇ ಸಾವುಗಳಾಗುತ್ತಿವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ದೇರಳಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರಗಿದ ಗ್ರಾಮಾಂತರ ಭಾಗಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು , ಮಂಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರುಗಳ ಸಮ್ಮುಖದಲ್ಲಿ ಜರಗಿದ ತುರ್ತು ಸಭೆಯಲ್ಲಿ ಮಾತನಾಡಿದರು.
ಫಸ್ಟ್ ಡೋಸ್, ಸೆಕೆಂಡ್ ಡೋಸ್ ಜೊತೆಗೆ ಥರ್ಡ್ ಡೋಸ್ ಆಗಿ ಶಾಶ್ವತ ಮಾಸ್ಕನ್ನು ಧರಿಸುವುದೇ ಸೋಂಕಿನಿಂದ ತಪ್ಪಿಸಬಹುದು. ಲಸಿಕೆ ಕೊರತೆ ಕುರಿತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಜನಜಾಗೃತಿ ಅಗತ್ಯ ನಿಭಾಯಿಸಬೇಕಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆಯಡಿ ಗ್ರಾಮ ಪಂಚಾಯಿತಿಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಎಚ್ಚರಿಸಲು ಸಂಪೂರ್ಣ ಅಧಿಕಾರವಿದೆ. ಜಿಲ್ಲಾಡಳಿತದ ಆದೇಶಗಳು ನಗರಮಟ್ಟದಲ್ಲಿ ಆಗುತ್ತಿದೆ ಆದರೆ ಗ್ರಾಮೀಣ ಮಟ್ಟದಲ್ಲಿ ಆಗುತ್ತಿಲ್ಲ ಅನ್ನುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ಗ್ರಾ.ಪಂ ಗಳು ತಕ್ಷಣಕ್ಕೆ ಆಕ್ಷನ್ ಪ್ಲ್ಯಾನ್ ಮಾಡಿ , ಭಿತ್ತಪತ್ರ ಮಾಡಿ ಮನೆಗೆ ಮುಟ್ಟಿಸುವ ಕೆಲಸವಾಗಬೇಕಿದೆ. ಮಾಹಿತಿಗಾಗಿ ಫ್ಲೆಕ್ಸ್ ಬೋರ್ಡು ಪಂ. ವ್ಯಾಪ್ತಿಯಲ್ಲಿ ಅಳವಡಿಕೆ ಅಗತ್ಯ
ಅಧಿಕಾರಿಗಳಲ್ಲಿ ಸಂವಹನ ಇರಲಿ. ಗ್ರಾಮಮಟ್ಟದ ಪ್ರತಿಯೊಬ್ಬರಿಗೂ ಜಿಲ್ಲಾ ಅಧಿಕಾರಿಗಳ ಜತೆಗೆ ಸಂವಹನ ಇರಲಿ. ಮನೆಯಲ್ಲೇ ಐಸೊಲೇಷನ್ ಹೊಂದಿರುವ ಸೋಂಕಿತರಿಗೆ ಔಷಧಿಗಳನ್ನು ವಿತರಿಸಲು ಆಶಾ ಕಾರ್ಯಕರ್ತೆಯರ ಜೊತೆಗೆ ಗ್ರಾ.ಪಂ ಸದಸ್ಯರು ಸಹಕರಿಸಬೇಕಿದೆ. ಶಿಕ್ಷಣ ಇಲಾಖೆಯವರನ್ನು ಸೋಂಕಿತರ ಮಾಹಿತಿ ಸಂಗ್ರಹಣೆಗೆ ನೇಮಿಸಲಾದರೂ, ವಾಹನಗಳ ಕಾರಣ ನೀಡಿ ಗ್ರಾಮಗಳಿಗೆ ಹೋಗುವ ಕಾರ್ಯವನ್ನು ಮಾಡುತ್ತಿಲ್ಲ. ತಕ್ಷಣವೇ ಪ್ರತಿ ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ಮಾಡಿ ಕೋವಿಡ್ ಕೇರ್ ಸೆಂಟರಿಗೆ ಜಾಗವನ್ನು ಗುರುತಿಸಿ ಇಡಿ ಎಂದ ಅವರು ಸೋಂಕಿತರು ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳ ಜೊತೆಗೆ ಪಂಚಾಯಿತಿ ಸದಸ್ಯರು ಕೈಜೋಡಿಸಿ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.
ಸಹಾಯಕ ಆಯುಕ್ತ ಮದನ್ ಮೋಹನ್ ಮಾತನಾಡಿ ಉಳ್ಳಾಲ ತಾಲೂಕಿನಲ್ಲಿ 718 ಸೋಂಕಿತರಿದ್ದಾರೆ. ಇವರಲ್ಲಿ ಶೇ.90 ರಷ್ಟು ಮಂದಿ ಮನೆಯಲ್ಲೇ ಐಸೊಲೇಷನ್ನಿನಲ್ಲಿ ಇದ್ದಾರೆ. ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದರೆ ಮಾತ್ರ ಉಳಿದುಕೊಳ್ಳಿ . ಇಲ್ಲವಾದಲ್ಲಿ ಜಿಲ್ಲಾಡಳಿತದ ವತಿಯಿಂದ ಏಳು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗಿದೆ. ಸೋಂಕಿತರು ಒಂದು ವಾರ ಅಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯಬಹುದು. 60 ವರ್ಷ ಮೇಲ್ಪಟ್ಟವರು, ಅಧಿಕ ರಕ್ತದೊತ್ತಡ, ಮಧುಮೇಹ ಇರುವವರು ಕೋವಿಡ್ ಸೆಂಟರಿನಲ್ಲಿ ಉಳಿದರೆ ಉತ್ತಮ . ಅಲ್ಲಿನ ಊಟ ಹಿಡಿಸದೇ ಇದ್ದಲ್ಲಿ ಮನೆಯಿಂದಲೂ ಊಟ ತರಬಹುದು. ಆರು ದಿನಗಳಿಂದ ಗ್ರಾಮೀಣ ಭಾಗಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಖಾಸಗಿ ಆಸ್ಪತ್ರೆಗಳು ಲಾಡ್ಜ್ ಗಳನ್ನು ಒಪ್ಪಂದ ಮಾಡಿಕೊಂಡು ಐಸೊಲೇಷನ್ ಕೇಂದ್ರಗಳನ್ನು ಮಾಡಿದಲ್ಲಿ ಜಿಲ್ಲಾಡಳಿತ ಅನುಮತಿ ನೀಡಲು ಸಿದ್ಧ . ಜಿಲ್ಲೆಯಾದ್ಯಂತ ಆಂಬ್ಯುಲೆನ್ಸ್ ಸೇವೆ ಲಭಿಸಲು ಓಲಾ, ಉಬರ್ ನಂತೆ ಆ್ಯಪ್ ರಚಿಸಲಾಗಿದೆ. ಖಾಸಗಿ ಆಂಬ್ಯುಲೆನ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಪ್ರತಿ ತಾಲೂಕಿಗೆ ಎರಡು ಆಂಬ್ಯುಲೆನ್ಸ್ ಗಳನ್ನು ನೀಡಲಾಗಿದೆ. ಅಂತಿಮ ಸಂಸ್ಕಾರಗಳನ್ನು ನಡೆಸಲು ಅಶಕ್ತರಾದವರಿಗೆ ಸರಕಾರವೇ ಅಂತಿಮ ಕ್ರಿಯೆಯನ್ನು ನಡೆಸುತ್ತಿದೆ. ಜಿಲ್ಲೆಯ 27 ಖಾಸಗಿ ಆಸ್ಪತ್ರೆಗಳಿಗೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಪಡೆಯುವ ಶುಲ್ಕ, ವೆಂಟಿಲೇಟರ್, ಐಸಿಯು ಲಭ್ಯ ಕುರಿತ ಮಾಹಿತಿಗಳನ್ನು ಆನ್ ಲೈನ್ ಮೂಲಕ ಬೆಳಿಗ್ಗೆ 8 ಮತ್ತು ಸಂಜೆ 4 ಕ್ಕೆ ಅಪ್ ಲೋಡ್ ಮಾಡಲಾಗುತ್ತಿದೆ. ಸೋಂಕಿತರು ಯಾವುದೇ ಗೊಂದಲಗಳು ಇದ್ದಲ್ಲಿ 1077 ಸಹಾಯವಾಣಿಗೆ ಫೋನಾಯಿಸಿದಲ್ಲಿ ಪರಿಹಾರ ದೊರೆಯುವುದು. ಅದನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ಧಿಗಳಿಂದ ಗೊಂದಲಕ್ಕೊಳಗಾಗದಿರಿ ಎಂದರು.
ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ ಅಂಬ್ಲಮೊಗರು ಗ್ರಾಮದಲ್ಲಿ 87, ಬೋಳಿಯಾರು 32, ಕೋಟೆಕಾರು 322, ಮಂಜನಾಡಿ 106 ಹಾಗೂ ಉಳ್ಳಾಲದಲ್ಲಿ 171 ಸೇರಿದಂತೆ ಉಳ್ಳಾಲ ತಾಲೂಕಿನಲ್ಲಿ 718 ಮಂದಿ ಸೋಂಕಿತರಿದ್ದಾರೆ. ಇವರಲ್ಲಿ 619 ಮಂದಿ ಹೋಂ ಐಸೊಲೇಷನ್ ಪಡೆಯುತ್ತಿದ್ದರೆ, 94 ಮಂದಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಸಂಪರ್ಕದಡಿ 3415 ಮಂದಿಯನ್ನು ಕ್ವಾರಂಟೈನಿನಲ್ಲಿರಿಸಲಾಗಿದೆ. ಕೋಟೆಕಾರು ಪರಿಸರದಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳಿರುವವರಿಂದ ಸಂಖ್ಯೆ ಹೆಚ್ಚಿದೆ. ನಗರ ಪ್ರದೇಶವಾಗಿರುವುದರಿಂದ ಉಳ್ಳಾಲದಲ್ಲಿ ಹೆಚ್ಚಿನ ಸೋಂಕಿತರಿಲ್ಲ . ಆದರೆ ಗ್ರಾಮೀಣ ಭಾಗಗಳಾದ ಪಾವೂರು, ಅಂಬ್ಲಮೊಗರು, ಮಂಜನಾಡಿ, ಹರೇಕಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಪಾಸಿಟಿವ್ ಆಗುವವರು ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಪ್ರಾಥಮಿಕ ಸಂಪರ್ಕದವರ ಮಾಹಿತಿಯನ್ನೇ ನೀಡದಿರುವುದು ಸೋಂಕಿತರ ಸಂಖ್ಯೆ ಹಚ್ಚಾಗಲು ಕಾರಣ. ಅಧಿಕಾರಿಗಳಲ್ಲಿ ಪ್ರತಿ ಭಾಗದ ಪಟ್ಟಿ ಅಗತ್ಯ ಇರಬೇಕು. ಕೋವಿಡ್ ಕೇರ್ ಸೆಂಟರುಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಅನುದಾನ ನೀಡಲಾಗುತ್ತಿದೆ ಎಂದರು.
ಎಸಿಪಿ ರಂಜಿತ್ ಬಂಡಾರು ` ಪೊಲೀಸ್ ಸಿಬ್ಬಂದಿಯಲ್ಲೂ ಪಾಸಿಟಿವ್ ಆಗುವವರ ಸಂಖ್ಯೆ ಹೆಚ್ಚಿದೆ. ಸಾರ್ವಜನಿಕರು ಮನೆಯಲ್ಲೇ ಇದ್ದುಕೊಂಡು ಇಲಾಖೆ ಜೊತೆಗೆ ಕೈಜೋಡಿಸಿ. ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ 150 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಸುಜಯ್ ಭಂಡಾರಿ ಮಾತನಾಡಿ ಸದ್ಯ ಕಾಂಪ್ಲಿಕೇಷನ್ ಬಂದ ಬಳಿಕವೇ ಅಡ್ಮಿಟ್ ಆಗುತ್ತಿದ್ದಾರೆ. ಇದರಿಂದ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಮನೆಯಲ್ಲಿ ಲಕ್ಷಣಗಳಿರುವಾಗ ತಿಳಿಸದೇ ಇರುವುದು, ಪ್ರಾಥಮಿಕ ಸಂಪರ್ಕ ತಿಳಿಸದೇ ಇರುವುದು ಸೋಂಕಿತರು ಹೆಚ್ಚಾಗಲು ಕಾರಣವಾಗುತ್ತಿದೆ. ಈ ಬಾರಿಯ ವೈರಸ್ ಮಕ್ಕಳಿಗೆ ಕೂಡಾ ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಐಸೊಲೇಷನ್ ಸರಿಯಾಗಿ ಪಾಲಿಸಿರಿ. ವ್ಯಾಕ್ಸಿನೇಷನ್ ಮೊದಲ ಸೆಷನ್ ಗೆ ಯಾರೂ ಬಂದಿರಲಿಲ್ಲ. ಇದೀಗ ಕೊರತೆ ಇರುವುದರಿಂದ ವ್ಯಾಕ್ಸಿನೇಷನ್ ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಪೂರೈಕೆಯಾಗುವ ವಿಶ್ವಾಸವಿದೆ ಎಂದರು.
ತಾ.ಪಂ ಇ.ಓ ನಾಗರಾಜ್ ಉಪಸ್ಥಿತರಿದ್ದರು.