
ಉಳ್ಳಾಲ: ನೇತ್ರಾವತಿ ನದಿ ತೀರದಿಂದ ಪರವಾನಿಗೆಯಿಲ್ಲದೆ ಮರಳು ಸಾಗಾಟ ನಡೆಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಲಾರಿಗಳ ಚಾಲಕರು, ಮಾಲಕರು , ಉಸ್ತುವಾರಿ ಹಾಗೂ ಲೋಡರ್ ಗಳ ವಿರುದ್ಧ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಕುತ್ತಾರು ಪ್ರದೇಶದಲ್ಲಿ ರೌಂಡ್ಸ್‍ನಲ್ಲಿದ್ದ ಸಂದರ್ಭ ಎರಡು ಟಿಪ್ಪರ್ ಲಾರಿಗಳನ್ನು ಬರುವುದನ್ನು ಗಮನಿಸಿ ಸಂಶಯಗೊಂಡು ನಿಲ್ಲಿಸಲು ಸೂಚಿಸಿದ್ದರು. ರಸ್ತೆ ಬದಿಯಲ್ಲಿಯೇ ಲಾರಿಗಳನ್ನು ನಿಲ್ಲಿಸಿದ ಚಾಲಕರ ಬಳಿ ಮರಳು ಸಾಗಾಟದ ಪರವಾನಿಗೆಯಿರಲಿಲ್ಲ. ನೇತ್ರಾವತಿ ನದಿಯ ಕಲ್ಲಾಪು ಭಾಗದಿಂದ ಕುತ್ತಾರು ರಸ್ತೆಯಾಗಿ ಮರಳು ಸಾಗಾಟ ನಡೆಸಲಾಗುತಿತ್ತು. ಎರಡು ಲಾರಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿರುವ ಉಳ್ಳಾಲ ಪೊಲೀಸರು , ಚಾಲಕ ಮೊಹಿಯುದ್ದೀನ್ ಬಾವ, ಪುತ್ತುಬಾವ , ಲಾರಿ ಮಾಲಕರು, ಲೋಡರ್ ಗಳ ವಿರುದ್ಧ ಕೋವಿಡ್ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಲಕ್ಷ್ಯತನ ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.