Site icon Ullalavani

ಚೆಂಬುಗುಡ್ಡೆ ವಿದ್ಯುತ್ ಚಿತಾಗಾರದ ನೀಲಿನಕ್ಷೆ ಸಿದ್ಧ : ಯು.ಟಿ ಖಾದರ್

ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯುತ್ ಚಿತಾಗಾರದ ಸ್ಥಳ ಪರಿಶೀಲನೆಯನ್ನು ಶಾಸಕ ಯು.ಟಿ ಖಾದರ್ ಮಾಡಿದರು.

ಉಳ್ಳಾಲ: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್ಫೋಸಿಸ್ ಸಂಸ್ಥೆ ಸಹಕಾರದೊಂದಿಗೆ ನಿರ್ಮಾಣವಾಗಲಿರುವ ವಿದ್ಯುತ್ ಚಿತಾಗಾರದ ನೀಲಿನಕ್ಷೆ ತಯಾರಾಗಿದೆ. ಸ್ಥಳೀಯರ ಆದ್ಯತೆ ಮೇರೆಗೆ ಅವರಿಗೆ ಸಹಕಾರ ಆಗುವಂತ ಸ್ಥಳದಲ್ಲಿ ಚಿತಾಗಾರ ನಿರ್ಮಾಣವಾಗಲಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಜಿಲ್ಲಾಡಳಿತ ಅನುಮತಿ ನೀಡಿರುವ ವಿದ್ಯುತ್ ಚಿತಾಗಾರ ನಿರ್ಮಿಸುವ ಸ್ಥಳದ ಪರಿಶೀಲನೆಯನ್ನು ನಡೆಸಿ ಮಾತನಾಡಿದರು.
ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿ ಸಮಿತಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ನಿರ್ಮಾಣಕ್ಕಾಗಿ ಹೆಚ್ಚಿನ ಸಹಕಾರ ನೀಡಿದೆ. ಅಲ್ಲಿನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಲ್ಲಿಸಿದ್ದ ಮನವಿಯಂತೆ ಸ್ಥಳಕ್ಕೆ ಜಿಲ್ಲಾಧಿಕಾರಿಯನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು. ಇದೀಗ ಕೋವಿಡ್ ಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಇನ್ಫೋಸಿಸ್ ಸಂಸ್ಥೆಯವರ ಸಹಕಾರದ ಜೊತೆಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಅನುಮತಿ ನೀಡಿದ್ದಾರೆ. ಸ್ಥಳೀಯರ ಬೇಕಾದ ಸ್ಥಳದಲ್ಲಿ ಚಿತಾಗಾರ ನಿರ್ಮಿಸಲು ಅಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಸ್ಥಳ ಬದಲಾವಣೆಗೆ ಒತ್ತು : ಚಿತಾಗಾರ ನಿರ್ಮಿಸುವ ನಿಗದಿತ ಸ್ಥಳದಲ್ಲಿ ದೈವಸ್ಥಾನ, ನಾಗಬನ ಹಾಗೂ ಶಾಲೆ ಇರುವುದರಿಂದ ಸ್ಮಶಾನದ ಸಮೀಪದ ಸ್ಥಳದಲ್ಲೇ ನಿರ್ಮಿಸುವಂತೆ ಸಮಿತಿಯವರು ಮನವಿ ಮಾಡಿದರು. ಅಲ್ಲದೆ ಅಧಿಕಾರಿಗಳು ಬೇರೆ ಸ್ಥಳದಲ್ಲಿ ನಿರ್ಮಿಸಲು ಅನುದಾನದ ಕೊರತೆ ಎದುರಾಗುವ ಸಾಧ್ಯತೆ ಇರುವುದನ್ನು ತಿಳಿಸಿರುವುದಾಗಿ ಶಾಸಕರಲ್ಲಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿ ಗ್ರಾಮಸ್ಥರನ್ನು ಒಟ್ಟು ಸೇರಿಸಿ ಪ್ಲ್ಯಾನ್ ರಚಿಸುವ ಕುರಿತು ಸೂಚಿಸಿದ ಶಾಸಕರು ಗ್ರಾಮಸ್ಥರು ತೋರಿಸುವ ಸ್ಥಳದಲ್ಲಿ ನಿರ್ಮಿಸುವ ಕುರಿತು ಪ್ಲ್ಯಾನ್ ರಚಿಸುವಂತೆ ದೂರವಾಣಿ ಮೂಲಕ ತಿಳಿಸಿದರು.
ಈ ಸಂದರ್ಭ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜ, ನಗರಸಭೆ ಸದಸ್ಯ ಶಶಿಕಲಾ, ಗುತ್ತಿಗೆದಾರ ಸುರೇಶ್ ಭಟ್ನಗರ ಸ್ಥಳೀಯರಾದ ಶೇಖರ್, ರೋಷನ್ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.

Exit mobile version