Site icon Ullalavani

ಕೋವಿಡ್ -19 : ಉಳ್ಳಾಲ ನಗರಸಭೆಯಿಂದ ಸಹಾಯವಾಣಿ

ಉಳ್ಳಾಲ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ತೊಂದರೆಯಾದಲ್ಲಿ, ಸಂಶಯಗಳಿದ್ದಲ್ಲಿ ಉಳ್ಳಾಲ ನಗರಸಭೆ ಸಹಾಯವಾಣಿ 8024487311 ಸಂಪರ್ಕಿಸುವಂತೆ ಉಳ್ಳಾಲ ನಗರಸಭೆ ಉಪಾಧ್ಯಕ್ಷ ಐಯೂಬ್ ಮಂಚಿಲ ಹೇಳಿದ್ದಾರೆ.

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸಮಗ್ರ ಮಾಹಿತಿ ಕುರಿತು ಬುಧವಾರ ನಡೆಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಐಸೊಲೇಷನ್ನಿನಲ್ಲಿ ಇರುವವರ ಕುರಿತು ನಗರಸಭೆ ಸದಸ್ಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ನಿಗಾ ವಹಿಸಿ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ಕೊರೊನಾ ಸೋಂಕಿತರಿಗಾಗಿ ಹೆಲ್ಪ್ ಲೈನ್ ಅನ್ನು ಆರಂಭಿಸಲಾಗಿದೆ. ಅವಶ್ಯಕತೆ ಬಂದಲ್ಲಿ ನಗರಸಭೆ ವತಿಯಿಂದ ಆಂಬ್ಯುಲೆನ್ಸ್ ಸೇವೆ ನೀಡಲು ಕೂಡ ಸಿದ್ಧರಿದ್ದೇವೆ ಎಂದ ಅವರು ಎಲ್ಲಾ ಧಾರ್ಮಿಕ ಕೇಂದ್ರಗಳು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗಿದೆ .ಮಸೀದಿ ಧ್ವನಿವರ್ಧಕಗಳ ಮೂಲಕವೂ ಪರಿಸರದ ಜನತೆಗೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತಿದೆ. ಪೌರಾಯುಕ್ತರು ಮತ್ತು ತಂಡ ಕೋವಿಡ್ ನಿಗ್ರಹ ಮಾಡುವಲ್ಲಿ ಬಹಳಷ್ಟು ಶ್ರಮಿಸುತ್ತಿದ್ದು, ಜನರು ಅವರೊಂದಿಗೆ ಸಹಕರಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಮಾತನಾಡಿ, ಜನ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೊರೊನಾ ವೈರಸನ್ನು ದೂರ ಮಾಡುವಲ್ಲಿ ಯಶಸ್ವಿಯಾಗಬೇಕು. ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತೊಂದರೆಗಳಾಗಿದ್ದಲ್ಲಿ ಸಹಾಯವಾಣಿ ಸಂಖ್ಯೆಯನ್ನು ದಿನ 24 ಗಂಟೆ ಸಂಪರ್ಕಿಸಬಹುದು ಎಂದರು.
ನಗರಸಭೆ ಪೌರಾಯುಕ್ತ ರಾಯಪ್ಪ ಮಾತನಾಡಿ ` ಎ.17 ರಿಂದ ಮೇ.4 ರವರೆಗೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 202 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇವರಲ್ಲಿ 38 ಆಸ್ಪತ್ರೆಯಲ್ಲಿ ಹಾಗೂ 164 ಹೋಂ ಐಸೊಲೇಷನ್ನಿನಲ್ಲಿ ಇದ್ದಾರೆ. ಈಗಾಗಲೇ 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 40 ಮಂದಿಯ ಹೋಂ ಐಸೊಲೇಷನ್ ಮುಗಿದಿದೆ. ಸದ್ಯ 124 ಮಂದಿ ಮನೆಯ ಐಸೋಲೇಷನ್ನಿನಲ್ಲಿ ಇದ್ದಾರೆ. 3 ಸಾವು ಸಂಭವಿಸಿದ್ದು,
ಪ್ರಾಥಮಿಕ ಸಂಪರ್ಕದ 621 ಹಾಗೂ ಸೆಕಂಡರಿ ಸಂಪರ್ಕ 567 ಮಂದಿಯನ್ನು ಕ್ವಾರಂಟೈನಿನಲ್ಲಿಡಲಾಗಿದೆ ಎಂದ ಅವರು ನಗರಸಭೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಮಾರುಕಟ್ಟೆಗಳಲ್ಲಿ ಜನ ಜಮಾಯಿಸುತ್ತಿದ್ದಾರೆ. ಇಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಇದನ್ನು ಅಗತ್ಯ ಪಾಲಿಸಿ ಸುರಕ್ಷತೆಯನ್ನು ಕಾಪಾಡಿರಿ ಎಂದ ಅವರು , ವ್ಯಾಕ್ಸಿನೇಷನ್ ಶಾರ್ಟೇಜ್ ಇದ್ದು, ಬಂದ ಬಳಿಕವಷ್ಟೇ ನೋಂದಾಯಿಸಿದ ಮಂದಿಗೆ ವ್ಯಾಕ್ಸಿನೇಷನ್ ಆಸ್ಪತ್ರೆಯಲ್ಲಿ ನಡೆಸುತ್ತಾರೆ. ಜನ ಗೊಂದಲಕ್ಕೊಳಗಾಗದಿರಿ ಎಂದರು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನಾ ಭಾನು ಉಪಸ್ಥಿತರಿದ್ದರು.

Exit mobile version