Site icon Ullalavani

ಭಾರೀ ಗಾಳಿ ಮಳೆಗೆ ಬೃಹತ್ ಕಮಾನು ಉರುಳಿದರೂ ಉರುಳದ ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್ ! ಸೋಷಿಯಲ್ ಮೀಡಿಯಾದಲ್ಲಿ ಕೋಟೆಕಾರು ಬೀರಿ ಬಸ್ಸು ನಿಲ್ದಾಣದ ಸುದ್ಧಿ ಭಾರೀ ವೈರಲ್

ಕಮಾನು ಉರುಳಿದರೂ ಉರುಳದ ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್ !ಕೋಟೆಕಾರು ಬೀರಿ ಬಸ್ಸು ನಿಲ್ದಾಣದ ಸುದ್ಧಿ ಭಾರೀ ವೈರಲ್

ಉಳ್ಳಾಲ: ನಿನ್ನೆ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಕೆ.ಜಿಗಟ್ಟಲೆ ತೂಕವಿದ್ದ ಸ್ವಾಗತ ಕಮಾನೊಂದು ರಸ್ತೆಗೆ ಉರುಳಿದರೆ, ದಶಕಗಳಿಂದ ಬೀರಿ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಹಾಕಲಾದ ಒಂದು ಕೋಲು , ಕೋಲಿನ ಅಳತೆಗೆ ಸಮಾನಾಗಿ ತಟ್ಟಿ , ಅದಕ್ಕೊಂದು ಕೆಎಸ್‍ಆರ್‍ಟಿಸಿ ಬಸ್ಸು ನಿಲುಗಡೆಯ ಸೂಚನೆಯ ನಾಮಫಲಕ ಕನಿಷ್ಟ ಅಂದರೂ 5 ರಿಂದ 6 ಕೆಜಿಯ ಬಸ್ಸು ನಿಲ್ದಾಣ ಮಾತ್ರ ಬೀಳದೆ ತನ್ನ ಬಲಪ್ರದರ್ಶಿಸಿದೆ. ಈ ಕುರಿತು ಬೀರಿ ನಿವಾಸಿ ಯುವಕರು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
`ವೀಕ್ಷಕರೇ, ಭಾರೀ ಮಳೆಗೆ, ಭಾರೀ ಗಾಳಿ ಬರ್ಸಕೆ ಇಡೀ ದ್ವಾರ ಮಗುಚಿಬಿದ್ದಿದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಇಲ್ಲಿವರೆಗೂ ಏನೂ ಆಗಿಲ್ಲ. ಎಂತ ಗಾಳಿ ಬಂದರೂ ಉರುಳದೇ ನಿಂತಿದೆ. ಯಾವ ಬಿರುಗಾಳಿಗೂ ಬಗ್ಗದ ನಮ್ಮ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್. ಕ್ಯಾಮರಾಮೆನ್ ಶಿವಪ್ರಸಾದ್ ಜತೆಗೆ ಸೂರಜ್ ಟಿವಿ 9 ‘ . ಅನ್ನುವ ಆಡಿಯೋ ಸಮೇತ ವೀಡಿಯೋ ದೃಶ್ಯಗಳು ಎಲ್ಲರನ್ನು ಮನರಂಜಿಸಿದೆ. ಇದೊಂದು ಕಡೆ ಮನರಂಜನೆ ವಿಚಾರವಾದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ತಲಪಾಡಿಯಿಂದ ತೊಕ್ಕೊಟ್ಟುವಿನವರೆಗೂ ನವಯುಗ ಸಂಸ್ಥೆ ನೀಡಿರುವ ಹಲವು ಬಸ್ಸು ನಿಲ್ದಾಣಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಬೀರಿ ಜಂಕ್ಷನ್ನಿನಲ್ಲಿ ಕೂಡ ಪ್ರಯಾಣಿಕರಿಗೆ ಅನುಕೂಲವಾಗಿ ಬಸ್ಸು ನಿಲ್ಲಿಸುವ ಸ್ಥಳದಲ್ಲಿಯೇ ಇರಬೇಕಾದ ಬಸ್ಸು ನಿಲ್ದಾಣ ಅರ್ಧ ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. ಇದರಿಂದ ಜನರೇ ಬಸ್ಸು ಬಂದು ನಿಲ್ಲಿಸುವ ಸ್ಥಳದಲ್ಲಿಯೇ ಬಸ್ಸು ನಿಲುಗಡೆಗಾಗಿ ತಾತ್ಕಾಲಿಕ ಶೆಡ್ ಅನ್ನು ಹಾಕಿದ್ದಾರೆ. ಆದರೆ ಸಾವಿರಾರು ರೂ. ಖರ್ಚು ಮಾಡಿ ನಿರ್ಮಿಸಿದ ಬಸ್ಸುನಿಲ್ದಾಣದ ಉಪಯೋಗಕ್ಕಿಲ್ಲ, ಜನರೇ ನಿರ್ಮಿಸಿದ ಶೆಡ್ ನಡಿ ಪ್ರಯಾಣಿಕರೆಲ್ಲರೂ ಸುಡುಬಿಸಿಲು, ಗಾಳಿ ಮಳೆಗೆ ನಿಂತು ಬಸ್ಸನ್ನೇರುತ್ತಿದ್ದಾರೆ. ನಿನ್ನೆಯ ಗಾಳಿ- ಮಳೆಗೂ ಸಾವಿರಾರು ಮಂದಿಯ ಉಪಯೋಗಕ್ಕೆ ಬರುವ ಬಸ್ಸು ನಿಲ್ದಾಣ ಅಂತ ಅನಿಸಿತ್ತೋ ಏನೋ. ಹಾಗಾಗಿ ಒಂಚೂರು ಹಾನಿಯಾಗದೇ ಹಾಗೆಯೇ ಉಳಿದಿದೆ. ಪಕ್ಕದಲ್ಲಿಯೇ ಹಾಕಲಾದ ಕಮಾನು ಮಾತ್ರ ರಸ್ತೆಗೆ ಉರುಳಿದೆ. ವೈರಲ್ ಆದ ವೀಡಿಯೋ ನೋಡಿಯಾದರೂ ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರಿಗೆ ಉಪಯೋಗಕ್ಕೆ ಬರುವಂತಹ ಬಸ್ಸು ನಿಲ್ದಾಣ ನಿರ್ಮಿಸಿದಲ್ಲಿ ಒಳಿತು ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Exit mobile version