Site icon Ullalavani

ತೊಕ್ಕೊಟ್ಟು : ಚೂರಿ ಇರಿತ ಪ್ರಕರಣ ಖಂಡನೀಯ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಉಳ್ಳಾಲ ಹಾಗೂ ಕೊಣಾಜೆ ವ್ಯಾಪ್ತಿಯಲ್ಲಿ ಹಲವು ಚೂರಿ ಇರಿತ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಆರೋಪಿಸಿದ್ದಾರೆ.

ಅವರು ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾದಕ ದ್ರವ್ಯಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಅಪರಾಧಿ ಚಟುವಟಿಕೆಗಳು ಮುಂದುವರಿಯುತ್ತಲೇ ಇದೆ. ಕೃತ್ಯ ಸಂದರ್ಭದಲ್ಲಿ ಸಿ.ಸಿ.ಟಿವಿ ನೋಡಿ ವಾಹನಗಳನ್ನು ಪತ್ತೆಹಚ್ಚುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿಲ್ಲ. ಉಳ್ಳಾಲ ವ್ಯಾಪ್ತಿಯಲ್ಲಿ ಹಲವೆಡೆ ಸಿ.ಸಿ.ಟಿವಿಗಳಿದ್ದರೂ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಪರಾಧ ತಡೆಗಟ್ಟಲು ನೇತ್ರಾವತಿಯಿಂದ ತಲಪಾಡಿವರೆಗೂ ಸಿ.ಸಿ ಟಿವಿಯನ್ನು ಅಳವಡಿಸಬೇಕಿದೆ. ರಾತ್ರಿ 8 ರಿಂದ 10 ಗಂಟೆಯೊಳಗೆ ಚೂರಿ ಇರಿತ ಪ್ರಕರಣಗಳು ನಡೆಯುತ್ತಿದೆ. ಒಂದೇ ರೀತಿಯಲ್ಲಿ ಹಿಂಬದಿಯಿಂದ ಸೊಂಟದ ಭಾಗಕ್ಕೆ ಚೂರಿ ಹಾಕುವುದು ನೋಡಿದಾಗ ಪರಿಣತ ಒಂದೇ ತಂಡದ ಕೃತ್ಯ ಎಂದು ಮನವರಿಕೆಯಾಗುತ್ತದೆ. ಈ ಮೂಲಕ ಶಾಂತಿಯುತವಾಗಿರುವ ಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗಿರುವುದು ಕಂಡುಬರುತ್ತದೆ. ತೊಕ್ಕೊಟ್ಟು ಸಮೀಪದ ಕಾಪಿಕಾಡು ಬಳಿ ಇತ್ತೀಚೆಗೆ ಯುವಕನೋರ್ವನ ಮೇಲೆ ಚೂರಿ ಇರಿತ ನಡೆಸಿದ ಪ್ರಕರಣದಲ್ಲಿ ಸಮೀಪದಲ್ಲಿರುವ ಖಾಸಗಿ ವಾಣಿಜ್ಯ ಮಳಿಗೆಯವರಲ್ಲಿರುವ ಸಿ.ಸಿ.ಟಿವಿಯನ್ನು ಪರಿಶೀಲಿಸಲಾಗಿಲ್ಲ. ಇದರಿಂದ ಪೊಲೀಸ್ ಇಲಾಖೆಯೂ ವಿರೋಧ ಪಕ್ಷದವರ ಜತೆಗೆ ಶಾಮೀಲಾಗಿ ಕಾಂಗ್ರೆಸ್ ಮತ್ತು ಸರಕಾರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನದಲ್ಲಿರುವ ಬಗ್ಗೆ ಶಂಕೆ ಉಂಟಾಗುತ್ತದೆ.ಮುಂದೆಯೂ ಇಂತಹ ಪ್ರಕರಣಗಳು ಮುಂದುವರಿದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಗುತ್ತದೆ.

ಕೊಣಾಜೆ ಠಾಣೆಯಲ್ಲಿ ಕೇಳುವ ಗತಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪರಿಸರದ ಜನ ಅನ್ಯೋನ್ಯತೆಯಿಂದ ಬಾಳಲು ಅಸಾಧ್ಯವಾಗುತ್ತದೆ. ಸರಾಸಗಾಟಾಗಿ ಕೇರಳ ಕಡೆಗೆ ಮರಳು ಸಾಗಾಟ ನಡೆಯುತ್ತಿದ್ದರೂ ಕೊಣಾಜೆ ಠಾಣಾ ಸರಹದ್ದನ್ನು ದಾಟಿ ಹೋಗುವ ಲಾರಿಗಳು ಮಂಜೇಶ್ವರ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿವೆ. ಇದು ಮಂಗಳೂರು ಪೊಲೀಸರ ಬೇಜವಾಬ್ದಾರಿತನವನ್ನು ತೋರಿಸುತ್ತದೆ.

ಬೆಂಗಳೂರು ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿರುವ ಸಚಿವರ ನಿಯೋಗ ಇಲ್ಲಿ ನಡೆಯುವ ಚೂರಿ ಇರಿತ ಪ್ರಕರಣಗಳನ್ನು ಸಿಬಿಐ ಮಾದರಿಯಲ್ಲಿ ಅಥವಾ ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಆಗ್ರಹಿಸಿದೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರೇ ಹೊಯ್ಗೆ ಸಾಗಾಟಗಾರರು?:

ಮಾಧ್ಯಮದವರ ಈ ಪ್ರಶ್ನೆಗೆ ಉತ್ತರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನ್ನ ಗಮನಕ್ಕೆ ಈವರೆಗೂ ಇಂತಹ ಯಾವುದೇ ಪ್ರಕರಣಗಳು ಬಂದಿಲ್ಲ. ಇಂತಹ ವ್ಯಾಪಾರದಲ್ಲಿ ತಾನಂತೂ ಕೈಜೋಡಿಸಿಲ್ಲ. ಪೊಲೀಸರಿಗೂ ಈವರೆಗೆ ಯಾರ ಲಾಭಿಗೂ ಮುಂದಾಗಿಲ್ಲ. ತನ್ನ ಬ್ಲಾಕ್ ವ್ಯಾಪ್ತಿಯಲ್ಲಿ ಯಾರ ದೂರುಗಳು ಕೇಳಿಬಂದರೂ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಮಾತ್ರವಲ್ಲ ಪೊಲೀಸರಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಖುದ್ದು ನಾವೇ ಮಾಹಿತಿ ನೀಡುತ್ತೇವೆ ಎಂದರು.

ಈ ಸಂದರ್ಭ ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್ ಕುಂಪಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಅಬ್ದುಲ್ ರೆಹಮಾನ್ ಕೋಡಿಜಾಲ್ ಹಾಗೂ ಪದ್ಮನಾಭ ಉಪಸ್ಥಿತರಿದ್ದರು.

Exit mobile version