ಉಳ್ಳಾಲ: ಮನೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಮಗನ ಫೋನ್ ಸ್ವಿಚ್ ಆಫ್ ಆಗಿದೆ. ಆರೋಪಿ ಬಾಲಕ ಕಳವು ಕೃತ್ಯಗಳಲ್ಲಿ ಹಿಂದೆ ಭಾಗಿಯಾದವ, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹತ್ಯೆಗೀಡಾದ ಆಕೀಫ್ ತಂದೆ ಹನೀಫ್ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಆಕೀಫ್ ಗೆ ಆರೋಪಿ ಜೊತೆಗೆ ಮೊಬೈಲ್ ಅಂಗಡಿಯಲ್ಲಿ ಪರಿಚಯವಾಗಿತ್ತು. ಮನೆ ಸಮೀಪದ ಶಾಂತಿನಗರದ ಮನೆಯೊಂದರಲ್ಲಿ ಸಿಕ್ಕ ಸಿಸಿಟಿವಿ ದಾಖಲೆಯಂತೆ ಆಕೀಫ್ ಮನೆಯಿಂದ 8.45ಕ್ಕೆ ವೇಗವಾಗಿ ನಡೆದುಕೊಂಡು ಹೋಗುವ ದೃಶ್ಯಗಳು ಸೆರೆಯಾಗಿವೆ. ಆರೋಪಿ ಮನೆಗೆ ತಲುಪಲು ಕನಿಷ್ಟ 12 ನಿಮಿಷಗಳಾದರೂ ಬೇಕಿದೆ. ಮನೆಗೆ ತಲುಪಿ ಮೊಬೈಲ್ ಗೇಮ್ ಆಟವಾಡಲು ಅರ್ಧ ಗಂಟೆಯಾದರೂ ಬೇಕಿದೆ. ಆದರೆ 9.05ರ ವೇಳೆಗೆ ಆಕೀಫ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾಯಿ ಅಂಗಡಿಯಿಂದ ಅಕ್ಕಿ ತರಲು ಹೇಳಿರುವುದನ್ನು ನೆನಪಿಸಲು ಆಕೀಫ್ ಮೊಬೈಲಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಗಿತ್ತು. ಆರೋಪಿ ಬಾಲಕ ಅಪರಾಧ ಹಿನ್ನೆಲೆಯವ. ಹಲವು ಮೊಬೈಲುಗಳನ್ನು ಕಳವುಗೈದಿದ್ದು, ಇದಕ್ಕೆ ಆತನ ಮನೆಯಲ್ಲಿ ಹಲವು ಮೊಬೈಲುಗಳಿರುವುದು ಸಾಕ್ಷಿ. ಈ ಹಿಂದೊಮ್ಮೆ ವ್ಯಕ್ತಿಯೊಬ್ಬರ 20,000 ರೂ. ಕಳವು ನಡೆಸಿ ಸಿಕ್ಕಿಬಿದ್ದಿದ್ದ. ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಬಾಲಕ ಸಂಘಪರಿವಾರದ ಜತೆಗಿರುವ ಹಲವು ಫೋಟೋಗಳಿವೆ. ಈ ನಿಟ್ಟಿನಲ್ಲಿ ಆಕೀಫ್ ಕೊಲೆ ಪೂರ್ವಯೋಜಿತ ಕೃತ್ಯ, ಪಬ್ ಜೀ ಆಟಕ್ಕಾಗಿ ನಡೆದ ಕೃತ್ಯವಲ್ಲ. ಪೊಲೀಸ್ ಇಲಾಖೆ ಆತನನ್ನು ಹಾಗೂ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಹೆತ್ತವರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

