
ಉಳ್ಳಾಲ: ತಲಪಾಡಿ ರೂಟ್ ಬಸ್ಸು ಕೊನೆ ಸ್ಟಾಪ್ ಹೋಗದೇ ಕಳೆದ ಒಂದು ವರ್ಷದಿಂದ ಪ್ರಯಾಣಿಕರು ಪಡುತ್ತಿದ್ದ ಸಂಕಷ್ಟಕ್ಕೆ ಇಂದು ಮಂಗಳೂರಿನ ಕದ್ರಿಯಲ್ಲಿರುವ ಮ.ನ.ಪಾ ವಿಭಾಗೀಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಹಂತದ ಪರಿಹಾರ ಸಿಕ್ಕಿದೆ.
ಸಿಟಿ ಬಸ್ ಮಾಲೀಕರು ನವಯುಗ ಸಂಸ್ಥೆಗೆ ರೂ.14,000 ಮಾಸಿಕವಾಗಿ ಸುಂಕವನ್ನು ಪಾವತಿಸುವ ನಿರ್ಣಯ ಕೈಗೊಳ್ಳುವ ಮೂಲಕ ಒಂದು ಹಂತದ ಸಂಧಾನ ಮುಗಿಸಿದೆ. ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ನೇತೃತ್ವದಲ್ಲಿ ಬಸ್ಸು ಮಾಲಕರು , ಟೋಲ್ ಅಧಿಕಾರಿಗಳ ನಡುವೆ ಇಂದು ಸಭೆ ನಡೆದಿದೆ. ಸಭೆಯಲ್ಲಿ ಪ್ರತೀ ಬಸ್ಸುಗಳು ತಿಂಗಳಿಗೆ 14,000 ರೂಪಾಯಿ ಸುಂಕವನ್ನು ಟೋಲ್ಗೆ ನೀಡಬೇಕೆಂಬ ತೀರ್ಮಾನಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ತಿಂಗಳ 14,000 ರೂಪಾಯಿ ಟೋಲನ್ನು ಮುಂಗಡವಾಗಿ ಕಟ್ಟಿದ ಮೇಲೆ ಅವರ ಪಾಸ್ಟ್ ಸ್ಟ್ಯಾಗ್ ಆಕ್ಟಿವೇಶನ್ ಆದ ಬಳಿಕ ಸಿಟಿ ಬಸ್ಸುಗಳು ತಲಪಾಡಿ ಟೋಲ್ ಗೇಟನ್ನು ಹಾದು ಮೇಲಿನ ತಲಪಾಡಿಗೆ ತೆರಳಬಹುದಾಗಿದೆ. ಇದಕ್ಕಾಗಿ ಮಂಗಳೂರಿನಿಂದ ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ 2 ರೂಪಾಯಿ ಏರಿಕೆ ಆಗಲಿದೆ. ಅಲ್ಲದೆ ತಲಪಾಡಿಯ ಸ್ಥಳೀಯ ವಾಹನ ಸವಾರರಿಗೆ ಟೋಲ್ನಲ್ಲಿ ರಿಯಾಯಿತಿ ನೀಡಲಾಗಿದೆ.
ಜಿ.ಪಂ ಮಾಜಿ ಸದಸ್ಯ ವಿನಯ್ ನಾಯ್ಕ್, ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಶಿಶುಮೋಹನ್ , ನವಯುಗ ಕಂಪನಿಯ ಶಿವಪ್ರಸಾದ್ ಶೆಟ್ಟಿ, ರಾಮಕೃಷ್ಣ, ಖಾಸಗಿ ಬಸ್ಸು ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲ್ ರಾಜ್ ಆಳ್ವ , ಪದಾಧಿಕಾರಿಗಳಾದ ಶರತ್ ಮರೋಳಿ, ಅಶ್ವತ್ಥಾಮ ಹೆಗ್ಡೆ, ರವಿರಾಜ್ , ಸುದೇಶ್ ಮರೋಳಿ, KSRTC ಅಧಿಕಾರಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ತಲಪಾಡಿ, ವಾಣಿ ಪೂಜಾರಿ,ತಾ.ಪಂ ಸದಸ್ಯರಾದ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ಗ್ರಾ.ಪಂ ಸದಸ್ಯರಾದ ವೈಭವ್ ಶೆಟ್ಟಿ, ಪ್ರಮುಖರಾದ ವಿನು ಶೆಟ್ಟಿ ಮೊದಲಾದವರು ಸಭೆಯಲ್ಲಿ ಇದ್ದರು.