Site icon Ullalavani

ತಲಪಾಡಿಗೆ ಬಾರದ ಬಸ್ಸುಗಳ ವಿರುದ್ಧ ನಾಗರಿಕರ ಪ್ರತಿಭಟನೆ

ಉಳ್ಳಾಲ: ತಲಪಾಡಿ ರೂಟ್  ಬಸ್ಸುಗಳು ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳದೆ ಒಂದು ಕಿ.ಮೀ ಉದ್ದಕ್ಕೆ ಪ್ರಯಾಣಿಕರು ನಡೆದುಕೊಂಡು ಸಾಗುತ್ತಾ ತೊಂದರೆಗೀಡಾಗುತ್ತಿರುವುದರ ವಿರುದ್ಧ ತಲಪಾಡಿ ನಾಗರಿಕರು ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಟೋಲ್ ಗೇಟ್ , ರಾ.ಹೆ ಪ್ರಾಧಿಕಾರ ಮತ್ತು ಸಿಟಿ ಬಸ್ ಮಾಲೀಕರ ವಿರುದ್ದ ಟೋಲ್ ಎದುರು ನಿಂತು ಪ್ರತಿಭಟನೆ ನಡೆಸಿ, ಮಾನವ ಸರಪಳಿಯನ್ನು ರಚಿಸಿ,  ಒಂದು ದಿನ ಟೋಲ್ ರಹಿತ ಬಸ್ ತೆರಳುವಂತೆ   ಮಾಡಿದ್ದಾರೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್ ಮಾತನಾಡಿ, ಟೋಲ್ ನಿರ್ಮಿಸುವ ಸಂದರ್ಭ  ಗ್ರಾಮದ ಜನರಲ್ಲಿದ್ದ 8 ಎಕರೆ ಪ್ರದೇಶವನ್ನು ಸೆಂಟ್ಸ್ ಗೆ  12,000 ರೂ. ನೀಡಿ ಖರೀದಿಸಿದರು. ಅದರ ಜೊತೆಗೆ ಸರಕಾರಿ ಜಾಗವನ್ನು ಗುಳುಂ ಮಾಡಿದರು. ಇದೀಗ ಗ್ರಾಮದ ಜನರಿಗೆ  ಇರುವ ಬಸ್ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಸಾಮಾನ್ಯ ಜನ ಟೋಲ್ ಎದುರು ನಿಂತರೆ ಬೊಬ್ಬಿಡುವ ಸಿಬ್ಬಂದಿ, ಒಂದು ವರ್ಷದಿಂದ ಸಿಟಿ ಬಸ್ ಗಳು ಎದುರಲ್ಲೇ ನಿಂತರೂ ಮಾತನಾಡುತ್ತಿಲ್ಲ. ಟೋಲ್ ಸಿಬ್ಬಂದಿ ಇದರ ಜತೆಗೆ ಕೈಜೋಡಿಸಿದ್ದಾರೆ‌. ಜಿಲ್ಲಾಡಳಿತ ತಕ್ಷಣ ತಲಪಾಡಿ ಗ್ರಾಮದ ಜನರ ಸಮಸ್ಯೆಗೆ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.

ಜಿ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, ವಿದ್ಯಾರ್ಥಿಗಳು, ವೃದ್ಧರು ಸುಡುಬಿಸಿಲಿನಲ್ಲಿ ನಡೆದುಕೊಂಡು ಸಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಗ್ರಾಮದ ನೆಲ, ನೀರು ಎಲ್ಲಾ ಕೊಟ್ಟರೂ, ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದು ಬಹಳ ಖೇದಕರ. ಇದು ಮುಂದುವರಿದಲ್ಲಿ ಉಗ್ರ ರೀತಿಯ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.

ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ, ಗ್ರಾಮದ ಜನರ ತಾಳ್ಮೆಯನ್ನು  ಟೋಲ್ ನವರು ಪರೀಕ್ಷಿಸದರಿ. ತಾಳ್ಮೆ ಕೆಟ್ಟಲ್ಲಿ   ಗ್ರಾಮದಲ್ಲಿ ಟೋಲ್ ಉಳಿಯಲು ಅಸಾಧ್ಯ. ಈ ಕೂಡಲೇ ಬಸ್ ನವರ ಜತೆಗೆ ಮಾತುಕತೆ ನಡೆಸಿ ಜನರ ಕಷ್ಟಕ್ಕೆ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.

31 ಬಸ್ಸುಗಳಿಗೆ ಮಾಸಿಕವಾಗಿ ರೂ. 2 ಲಕ್ಷ ಕೊಡುವುದಾಗಿ    ತಲಪಾಡಿ ಬಸ್ಸು ಮಾಲೀಕರ ಸಂಘ ಮನವಿ ಮಾಡಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಎರಡು ಬಾರಿ ಸಭೆ ಸೇರಿದರೂ, ನವಯುಗ ಸಂಸ್ಥೆ ಪ್ರತಿಕ್ರಿಯಿಸದ ಹಿನ್ನೆಲೆ ಸಭೆ ಮೊಟಕುಗೊಂಡು, ತಲಪಾಡಿ ಜನರ ತೊಂದರೆ ಮುಂದುವರಿದಿದೆ.ಮಿನಿ ಬಸ್ಸಿಗೆ ರೂ. 10,000, ದೊಡ್ಡ ಬಸ್ಸುಗಳಿಗೆ ರೂ. 20,000  ಬೇಡಿಕೆಯನ್ನು ನವಯುಗ ಸಂಸ್ಥೆ ಮುಂದಿಟ್ಟಿದೆ. ಆದರೆ ಅಷ್ಟೊಂದು ಹಣ ಪಾವತಿ ಕಷ್ಟವೆಂದು ತಲಪಾಡಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಕರೀಂ ತಿಳಿಸಿದರು.

ಟೋಲ್ ಎದುರು ಹಮ್ಮಿಕೊಂಡ ಪ್ರತಿಭಟನೆ ಬಳಿಕ ಸಿಟಿ ಬಸ್ಸು ತಿರುಗುವ ಪ್ರದೇಶದಿಂದ ಟೋಲ್ ಎದುರುವರೆಗೆ ಮಾನವ ಸರಪಳಿಯನ್ನು ರಚಿಸಲಾಯಿತು.  ಬಳಿಕ ಟೋಲ್ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು  ಸಿಟಿ ಬಸ್ ಗಳನ್ನು ಬಿಡುವಂತೆ ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾಕಾರರ ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಸಂದೀಪ್ , ಪರಿಸ್ಥಿತಿಯನ್ನು ಹತೋಟಿಗೆ ತಂದರು.  ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಇಂದು ದಿನವಿಡೀ ಸಿಟಿ ಬಸ್ಸುಗಳನ್ನು ಟೋಲ್ ನಲ್ಲಿ ಉಚಿತವಾಗಿ ಕಳುಹಿಸಲಾಯಿತು.

ಪ್ರತಿಭಟನೆಯಲ್ಲಿ  ತಾ.ಪಂ ಸದಸ್ಯೆ ಸಿದ್ದೀಖ್ ಕೊಳಂಗೆರೆ, ತಲಪಾಡಿ ಪಂ..ಸದಸ್ಯ ಇಸ್ಮಾಯಿಲ್ ಕೆ.ಸಿ ರೋಡ್, ಸಾಮಾಜಿಕ ಕಾರ್ಯಕರ್ತ  ಯಶು ಪಕಳ ಮುಂತಾದವರು ಉಪಸ್ಥಿತರಿದ್ದರು.

Exit mobile version