Site icon Ullalavani

ಬಾಲಕನ ಅಪಹರಣ: 17ಕೋಟಿ ರೂ ಡಿಮ್ಯಾಂಡ್

UN networks

ಬೆಳ್ತಂಗಡಿ:
ಸಿನಿಮೀಯ ಮಾದರಿಯಲ್ಲಿ ಬಾಲಕನೊಬ್ಬನನ್ನು ಅಪಹರಣಕಾರರು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿರುವ ಆತಂಕಕಾರಿ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಪೋಷಕರ ಮುಂದೆ ಇಟ್ಟಿದ್ದಾರೆ.

ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ನಿವಾಸಿ ಉದ್ಯಮಿ ಬಿಜೋಯ್ ಇವರ ಪುತ್ರ ಅನುಭವ್ (8) ಅಪಹರಣಗೊಂಡ ಬಾಲಕ.

ಗುರುವಾರ ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಬಂದ 3 ರಿಂದ 4 ಮಂದಿ ಅಪರಿಚಿತರ ತಂಡವೊಂದು ಮನೆಯ ಗೇಟ್ ಬಳಿಯಿಂದಲೇ ಬಾಲಕನನ್ನು ಅಪಹರಿಸಲಾಗಿದ್ದು ಚಾರ್ಮಾಡಿ ಮೂಲಕ ಪರಾರಿಯಾಗಿದ್ದಾರೆ
ಎನ್ನಲಾಗಿದ್ದು ಈ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದಲ್ಲಿ ಪೊಲೋಸರು ತನಿಖೆ ಪ್ರಾರಂಭಿಸಿದ್ದಾರೆ.

ಶಿವನ್ ಅವರು ಸಂಜೆ ಹೊತ್ತಿಗೆ ಮನೆ ಬಳಿಯಲ್ಲಿ ವಾಕಿಂಗ್ ಹೋಗಿದ್ದರು. ಈ ವೇಳೆ, ಮೊಮ್ಮಗ ಹೊರಗೆ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಹತ್ತಿರ ಬಂದು ಬಾಲಕನನ್ನು ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿದ್ದಾರೆ. ಶಿವನ್ ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾ ಬೊಬ್ಬೆ ಹಾಕುತ್ತಿದ್ದಾಗಲೇ ಕಾರನ್ನು ಚಲಾಯಿಸಿಕೊಂಡು ರಥಬೀದಿ ಕಡೆಗೆ ತೆರಳಿದ್ದಾರೆ. ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಫೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಠಾಣೆಗೆ ಬಾಲಕನ ಅಜ್ಜ ಶಿವನ್  ಅವರು ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರಿನಲ್ಲಿದ್ದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಅಪಹರಣದ ಬಳಿಕ ನೇರವಾಗಿ ಕಾರು ಚಾರ್ಮಾಡಿ ಮೂಲಕ ಪರಾರಿಯಾಗಿದೆ. ಹೀಗಾಗಿ ನಿನ್ನೆ ರಾತ್ರಿಯೇ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಮೂಡಿಗೆರೆ, ಹಾಸನ ಭಾಗದಲ್ಲಿ ಪೊಲೀಸರು ಶೋಧ ಆರಂಭಿಸಿದ್ದಾರೆ. ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. 

Exit mobile version