Site icon Ullalavani

ಉಳ್ಳಾಲ‌ ನಗರದ ಸಭೆಯಿಂದ ದಿಢೀರ್ ದಾಳಿ

UN Networks

ಉಳ್ಳಾಲ‌ ನಗರದ ಸಭೆಯಿಂದ ದಿಢೀರ್ ರೈಡ್, ಹಲವು ಅಂಗಡಿಗಳಿಗೆ ಬೀಗ
ಹಲವು ವರ್ಷಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟದೆ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳಿಗೆ ಗುರುವಾರ ನಗರಸಭೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅತ್ಯಧಿಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ ಜಡಿದಿದೆ.


ಉಳ್ಳಾಲ‌ ನಗರಸಭೆಯ ತೊಕ್ಕೊಟ್ಟಿನಲ್ಲಿರುವ ಕಟ್ಟಡದಲ್ಲಿ ಹೋಟೆಲ್, ಬಟ್ಟೆಯಂಗಡಿ, ಬೇಕರಿ, ಜೆರಾಕ್ಸ್, ಫಾಸ್ಟ್ ಫುಡ್ ಸಹಿತ 50 ಮಳಿಗೆಗಳಿದ್ದು, ಹಲವು ಮಳಿಗೆಗಳಿಂದ ಬಾಡಿಗೆ ಪಾವತಿಯಾಗದೆ ಹಲವು ತಿಂಗಳುಗಳೇ ಕಳೆದಿವೆ. ಐದು ಲಕ್ಷ ಬಾಡಿಗೆ ಬಾಕಿಯಿರುವ ಅಂಗಡಿಗಳೂ ಇವೆ. ಈ ಹಿನ್ನೆಲೆಯಲ್ಲಿ ಗುರುವಾರ ಪೌರಾಯುಕ್ತ ರಾಯಪ್ಪ ನೇತೃತ್ವದ ತಂಡ ದಾಳಿ ನಡೆಸಿ ಅಧಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ‌ ಜಡಿದರೆ, ಕೆಲವು ಅಂಗಡಿದಾರರಿಗೆ ಎರಡು ದಿನಗಳ‌ ಸಮಯ ನಿಗದಿಪಡಿಸಿದ್ದಾರೆ. ಇದೇ ವೇಳೆ ನಗರಸಭೆಯ ಅಡಿಭಾಗದಲ್ಲಿರುವ ಮೂರು ಅಂಗಡಿಗಳಿಗೂ ಬೀಗ ಜಡಿದಿದ್ದಾರೆ.
ಕೌನ್ಸಿಲರ್ ನಿಂದಲೂ ಬಾಕಿ!
ದಾಳಿ ಸಂದರ್ಭ ಕೌನ್ಸಿಲರ್ ಭಾರತಿ ಅವರ ಅಂಗಡಿಯಿಂದಲೂ 30 ಸಾವಿರ ರೂಪಾಯಿ ಬಾಡಿಗೆ ಬಾಕಿಯಿರುವುದು ಕಂಡು ಬಂದಿದೆ‌‌. ಈ ಹಿನ್ನೆಲೆಯಲ್ಲಿ ಅವರಿಗೂ ಬಾಡಿಗೆ ಪಾವತಿಸುವಂತೆ ರಾಯಪ್ಪ ತಾಕೀತು ಮಾಡಿ ಎರಡು ದಿನಗಳ ಸಮಯಾವಕಾಶ ನೀಡಿದ್ದು, ತಪ್ಪಿದಲ್ಲಿ ಬೀಗ ಜಡಿಯುವುದಾಗಿ ಎಚ್ಚರಿಸಿದ್ದಾರೆ.
ಒಳಬಾಡಿಗೆಯಿಂದಲೇ ಸಮಸ್ಯೆ!
ಇಲ್ಲಿರುವ ಬಹುತೇಕ ಮಳಿಗೆಗಳು ಯಾರದ್ದೋ ಹೆಸರಲ್ಲಿದ್ದು, ಮೂರ್ನಾಲ್ಕು ಮಂದಿ ಒಳಬಾಡಿಗೆಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುವವರು ತಾವು ಯಾರಲ್ಲಿ ಕೋಣೆ ಪಡೆದಿದ್ದಾರೋ ಅವರಿಗೆ ಬಾಡಿಗೆ ಪಾವತಿಸಿದರೂ, ನಗರಸಭೆ ತಲುಪಿಲ್ಲ. ಈ ಬಗ್ಗೆ ಪ್ರಸ್ತುತ ಬಾಡಿಗೆದಾರರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದೊಡ್ಡ ಮಟ್ಟದ ವ್ಯಾಪಾರಿಗಳೂ ದೊಡ್ಡ ಮೊತ್ತದ ಬಾಡಿಗೆ ಬಾಕಿಯಿಟ್ಟಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ರಾಯಪ್ಪ, ನೀವೇ ಹೀಗೆ ಮಾಡಿದರೆ, ಬಡವರು ಏನು ಮಾಡಬೇಕು? ನಿಮ್ಮಂತಹವರು ತಿಂಗಳ ಬಾಡಿಗೆ ಮುಂಗಡವಾಗಿಯೇ ಪಾವತಿಸಬೇಕಿತ್ತು. ಬಾಡಿಗೆ ಬಾಕಿಯಿಟ್ಟು ನಗರಸಭೆ ಅಭಿವೃದ್ಧಿಗೆ ಅಡ್ಡಿಯಾಗಬೇಡಿ ಎಂದು ಮನವಿ ಮಾಡಿದರು.

‘ಸೂಕ್ತ ಸಮಯದಲ್ಲಿ ಬಾಡಿಗೆ ಹಣ ಪಾವತಿಯಾದರೆ ನಗರಾಭಿವೃದ್ಧಿಗೆ ಸಹಕಾರವಾಗುತ್ತದೆ, ಈ ವಿಚಾರದಲ್ಲಿ
ಯಾವುದೇ ಒತ್ತಡಕ್ಕೆ ಹೆದರುವುದಿಲ್ಲ, ಇನ್ನೆರಡು ದಿನಗಳಲ್ಲಿ ಎಲ್ಲರೂ ಬಾಡಿಗೆ ಪಾವತಿಸದಿದ್ದರೆ ಅಂಗಡಿಗಳಿಗೆ ಬೀಗ ಹಾಕಿ ಬಳಿಕ ಹರಾಜು ಹಾಕಲಾಗುವುದು’
ರಾಯಪ್ಪ, ನಗರಸಭಾ ಪೌರಾಯುಕ್ತ

Exit mobile version