UN networks
ಉಳ್ಳಾಲ: ಮನೆ ಆವರಣದಲ್ಲಿ ನಿಲ್ಲಿಸಲಾದ ಬೈಕ್ ನ್ನು ಕಳ್ಳರು ಕಳವು ನಡೆಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ಉಳ್ಳಾಲ ಠಾಣಾ ವ್ಯಾಪ್ತಿಯ ನಡಾರು ಬಳಿ ನಡೆದಿದ್ದು, ಕೆಲ ದಿನಗಳ ಅಂತರದಲ್ಲಿ ಮನೆ ಎದುರುಗಡೆ ನಿಲ್ಲಿಸಲಾದ ಬೈಕನ್ನು ಕಳವು ನಡೆಸಿರುವ ಎರಡನೇ ಪ್ರಕರಣವಾದರೂ ಉಳ್ಳಾಲ ಠಾಣಾ ಪೊಲೀಸರಿಗೆ ಈವರೆಗೆ ಕಳ್ಳರ ಪತ್ತೆ ಅಸಾಧ್ಯವಾಗಿದೆ.
ದೇರಳಕಟ್ಟೆ ನಡಾರು ಬಳಿಯ ನಿಶಾಂತ್ ಎಂಬವರಿಗೆ ಸೇರಿದ ಸಿಲ್ವರ್ ಬಣ್ಣದ ರಾಯಲ್ ಎನ್ಫೀಲ್ಡ್ ಬುಲೆಟ್ ವಾಹನ ಕಳವು ನಡೆದಿದೆ. ಮನೆ ಎದುರುಗಡೆ ಡಿ.16 ರ ಬುಧವಾರ ರಾತ್ರಿ ಬೈಕ್ ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಬುಲೆಟ್ ಕಳವಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ನಿಶಾಂತ್ ಅವರು ದೂರು ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಅಂತರದಲ್ಲಿ ಇದು ಎರಡನೇ ಕಳವು ಪ್ರಕರಣವಾಗಿದೆ. ಕೊಲ್ಯ ಮನೆ ಎದುರುಗಡೆ ನಿಲ್ಲಿಸಲಾಗಿದ್ದ ಬೈಕನ್ನು ಕಳ್ಳರಿಬ್ಬರು ಕಳವು ನಡೆಸಿ ದಿನಗಳೇ ಕಳೆದಿವೆ. ಈ ಕುರಿತು ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಸಿಸಿಟಿವಿ ದಾಖಲೆಗಳಿದ್ದರೂ ಇಬ್ಬರು ಕಿರಾತಕರನ್ನು ಪತ್ತೆ ಹಚ್ಚುವಲ್ಲಿ ಉಳ್ಳಾಲ ಪೊಲೀಸರು ವಿಫಲರಾಗಿದ್ದಾರೆ.
ಇದೇ ರೀತಿಯಲ್ಲಿ ರಾ.ಹೆ66 ಕೊಲ್ಯ, ಕಾಪಿಕಾಡು ಬಳಿ ನಿಲ್ಲಿಸಲಾಗಿದ್ದ ಬೈಕ್ ಹಿಂದೆ ಕಳ್ಳರು ಕಳವು ನಡೆಸಿದ್ದಾರೆ. ಆದರೆ ಎಫ್ ಐ ಆರ್ ದಾಖಲಾಗಿ ಒಂದು ವರ್ಷವಾದರೂ ಕಳ್ಳರ ಪತ್ತೆಯಾಗಿಲ್ಲ ಎಂದು ಬೈಕ್ ಕಳೆದುಕೊಂಡ ಮನೆ ಮಾಲಕಿ ದೂರಿಕೊಂಡಿದ್ದಾರೆ . ಇದೇ ರೀತಿಯಲ್ಲಿ ಹಲವು ಪ್ರಕರಣಗಳು ಬಾಕಿಯಾಗಿದೆ. ಆದರೆ ಬೈಕ್ ಕಳ್ಳರ ಜಾಲ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ ವಾಹನಗಳನ್ನು ಕಳ್ಳರು ನಿತ್ಯ ನಿರಂತರ ಭಯಭೀತಿಯಿಲ್ಲದೆ ದೋಚುತ್ತಿರುವುದು ಪೊಲೀಸರ ಕರ್ತವ್ಯ ವೈಫಲ್ಯವೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.