Site icon Ullalavani

ರಸ್ತೆ ದಾಟಿ ಮತ್ತೆ ಹಿಂತಿರುಗಿದ್ದೇ ಬಾಲಕನ ಪ್ರಾಣಕ್ಕೆ ಎರವಾಯಿತು!ಕುಂಪಲ ಬೈಪಾಸ್ ಅಪಘಾತ ಪ್ರಕರಣ

UN networks

ಉಳ್ಳಾಲ: ಕುಂಪಲ ಬೈಪಾಸ್ ಬಳಿ ಶುಕ್ರವಾರ ಸಂಜೆ ಕಾರು ಅಪಘಾತಕ್ಕೀಡಾಗಿ ರಸ್ತೆ ದಾಟುತ್ತಿದ್ದ ಕುಂಪಲ ಬೈಪಾಸ್ ನಿವಾಸಿ ಅಯಾನ್ (16) ಇಂದು ನಸುಕಿನ ಜಾವ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮನೆ ಎದುರುಗಡೆಯ ರಾ.ಹೆ.66 ನ್ನು ಒಂದೊಮ್ಮೆ ದಾಟಿದ್ದ ಬಾಲಕ ಮತ್ತೊಮ್ಮೆ ದಾಟಲು ಯತ್ನಿಸುವಾಗಲೇ ಅಪಘಾತ ನಡೆದು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾನೆ.


ಬಶೀರ್ ಅಹ್ಮದ್ ,ರಿಯಾನ ದಂಪತಿ ಪುತ್ರನಾಗಿರುವ ಅಯಾನ್, ಜೆಪ್ಪು ಪ್ರೆಸ್ಟೀಜ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ . ಇನ್ನೋರ್ವ ಪುತ್ರಿ ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ. ಸಂಜೆ ವೇಳೆ ಮನೆ ಎದುರುಗಡೆಯ ಅಂಗಡಿಗೆ ತೆರಳಿದ್ದ ರಿಯಾನ್ ಹೆದ್ದಾರಿಯನ್ನು ದಾಟಿ ಸಾಮಾಗ್ರಿಗಳೊಂದಿಗೆ ರಸ್ತೆ ದಾಟಿದ್ದರೂ, ಮತ್ತೆ ಏನನ್ನೋ ಮರೆತು ವಾಪಸ್ಸು ರಸ್ತೆ ದಾಟಲು ಯತ್ನಿಸಿದ್ದ ಸಂದರ್ಭ ಬೀರಿ ಕಡೆಯಿಂದ ಮಂಗಳೂರಿನತ್ತ ಧಾವಿಸುತ್ತಿದ್ದ ನಾಲ್ವರು ಯುವಕರಿದ್ದ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅಯಾನ್ ರಸ್ತೆಗೆಸೆಯಲ್ಪಟ್ಟು ತಲೆ, ಕಾಲು ಮತ್ತು ಕೈಗಳಿಗೆ ಗಂಭೀರ ಗಾಯವಾಗಿತ್ತು. ನಿಯಂತ್ರಣ ತಪ್ಪಿದ್ದ ಕಾರು ಸ್ಥಳದಲ್ಲೇ ಇರುವ ಮಸೀದಿ ಎದುರುಗಡೆಯ ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ನಿಂತಿತ್ತು. ಮೃತ ಬಾಲಕನ ಅಂತಿಮ ಕಾರ್ಯ ಶನಿವಾರ ಮಧ್ಯಾಹ್ನ ಕುಂಪಲ ಬೈಪಾಸ್ ಮಸೀದಿಯಲ್ಲಿ ನಡೆಯಿತು. ಮಂಗಳೂರು ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರ ಕಳೆಯುವುದರೊಳಗೆ ಎರಡನೇ ಅಪಘಾತವಾಗಿದ್ದು, ಉಳ್ಳಾಲ ಬೈಲಿನಲ್ಲಿ ಎಂಟರ ಹರೆಯದ ಬಾಲಕನೋರ್ವ ಮೃತಪಟ್ಟಿದ್ದರೆ, ಇದೀಗ ಅಯಾನ್ ಸಾವು ಸಂಭವಿಸಿದೆ.

Exit mobile version