Site icon Ullalavani

ವಿಶೇಷ ಚೇತನರ ಮೀಸಲಾತಿ ಹೆಚ್ಚಳ : ಡಾ. ಸೆಲ್ವಮಣಿ

ಉಳ್ಳಾಲ: ವಿಶೇಷ ಚೇತನರಿಗೆ ಸರಕಾರಿ ಸವಲತ್ತುಗಳಲ್ಲಿ ಈ ಬಾರಿಯಿಂದ ಶೇ.3 ರಿಂದ ಶೇ.5 ಕ್ಕೆ ಹೆಚ್ಚುವರಿಗೊಳಿಸಲಾಗಿದೆ. ಗ್ರಾ.ಪಂ ಮಟ್ಟದಿಂದಲೇ ಮೀಸಲಾತಿಗಳನ್ನು ಸರಕಾರಿ ಆದೇಶದಂತೆ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್ ಸೆಲ್ವಮಣಿ ಅಭಿಪ್ರಾಯಪಟ್ಟರು.

ದೇರಳಕಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಮಕ್ಕಳ ವಿಭಾಗ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗಗಳ ಆಶ್ರಯದಲ್ಲಿ ನ್ಯೂ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ವಿಶ್ವ ವಿಶೇಷ ಚೇತನರ ದಿನ ಮತ್ತು N-SPECC COVID SAFE PROJECT ಇದರ ಯಶಸ್ವಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್‌( N-SPECC) ಕೊರೊನಾ ಸಂದರ್ಭ ವಿಶೇಷ ಚೇತನ ಮಕ್ಕಳಿಗೆ ಹಮ್ಮಿಕೊಂಡಿರುವ ಕಾರ್ಯ ಗೌರವಿಸುವಂತದ್ದು. ಈ ಕುರಿತು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದ ಅವರು ಶಿಕ್ಷಣ ಇಲಾಖೆ ಹಾಗೂ ಜಿ.ಪಂಗೆ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ.ವಿಶೇಷ ಚೇತನ ಮಕ್ಕಳು ಹುಟ್ಟದಂತೆ ಜೀಡಿಯಾಟ್ರಿಕ್ ಕೇರ್ ಕುರಿತ ಜಾಗೃತಿ ಹೆತ್ತವರಲ್ಲಿ ಮೂಡಿಸಬೇಕಿದೆ. ಈ ಕುರಿತು ವಿಶೇಷ ಒತ್ತು ನೀಡಲು ನಿಟ್ಟೆ ವಿ.ವಿ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿ.ವಿ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ವಹಿಸಿ ಮಾತನಾಡಿ ವಿಶೇಷ ಚೇತನ ಮಕ್ಕಳ ಕುರಿತು ಅನುಕಂಪ ಬೇಡ. ಆದರೆ ಅವರಿಗೆ ಸಮಾಜದಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆ ಆಗಬೇಕಿದೆ. ಹೆತ್ತವರನ್ನು ಜೆನೆಟಿಕ್ ಕೌನ್ಸಿಲಿಂಗ್ ನಡೆಸಿದಲ್ಲಿ ವಿಶೇಷ ಚೇತನ ಮಕ್ಕಳ ಹುಟ್ಟುವಿಕೆಯನ್ನು ತಪ್ಪಿಸಬಹುದು. ಈ ವಿಭಾಗ ಕ್ಷೇಮ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ ಎಂದರು.

ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಮಂಗಳೂರು ದಕ್ಷಿಣ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಕೆ., ಮಂಗಳೂರು ಉತ್ತರ ಬಿಆರ್ ಪಿ ಮಂಜುಳಾ, ಡಿಡಿಪಿಐ ಶೀಲಾವತಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭ ಮಕ್ಕಳ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗ ರಚಿಸಿದ ಜಾಗೃತಿ ಕುರಿತ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮಗಳ ಮಾಹಿತಿಯನ್ನು ಡಾ. ಕವಿತಾ ರೈ ನೀಡಿದರು.

ಕಾರ್ಯಕ್ರಮದಲ್ಲಿ N-SPECC COVID SAFE PROJECT ನಡಿ ವಿಶೇಷ ಚೇತನ ಮಕ್ಕಳಿಗೆ ಕೊರೊನಾ ಜಾಗೃತಿ ಮೂಡಿಸಿದ ಡಾ. ಅಮರಶ್ರೀ ಎ. ಶೆಟ್ಟಿ ಹಾಗೂ ಸಿಂಥಿಯಾ ಹಾಗೂ ಶಾಂತಿ ಡಿಸೋಜ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಮೂವರು ವಿಶೇಷ ಚೇತನ ಮಕ್ಕಳಿಗೆ ವ್ಹೀಲ್ ಚೇರ್, ಕೃತಕ ಕಾಲು, ಸಿ.ಪಿ ಬೆಡ್ ಹಾಗೂ ಸ್ಪೆಕ್ಟಾಕಲ್ ಗಳನ್ನು ವಿತರಿಸಲಾಯಿತು.

ಡೀನ್ ಪ್ರೊ. ಯು.ಎಸ್ ಕೃಷ್ಣನಾಯಕ್ ಸ್ವಾಗತಿಸಿದರು.
ಡಾ. ಅದಿತಿ ಆಚಾರ್ಯ ನಿರೂಪಿಸಿದರು.
ವಿಭಾಗ ಮುಖ್ಯಸ್ಥೆ ಡಾ. ಅಮಿತಾ ಎಂ ಹೆಗ್ಡೆ ವಂದಿಸಿದರು.

‘ ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್ ಕಳೆದ ಎಂಟು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸರಕಾರದ ಸರ್ವ ಶಿಕ್ಷಣ ಅಭಿಯಾನದ ಜಂಟಿ ಆಶ್ರಯದಲ್ಲಿ ಕಳೆದ ಐದು ವರ್ಷಗಳಿಂದ ಮುಂದುವರಿದು ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಂಗಳೂರು ತಾಲೂಕಿನಾದ್ಯಂತ ವಿಶೇಷ ಚೇತನರ ದಂತ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಹಾಗೂ ಮೆಡಿಕಲ್ ಸ್ಕ್ರೀನಿಂಗ್ ಅನ್ನು ಕಡಿಮೆ ವೆಚ್ಚದಲ್ಲಿ ನಡೆಸುತ್ತಾ ಬರುತ್ತಿದೆ. ಕೊರೊನಾ ಸಂದರ್ಭ ವಿಶೇಷ ಚೇತನರು ಇರುವ ಮನೆಗಳಿಗೆ ತೆರಳಿ ಜಾಗೃತಿಯನ್ನು ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ.

ಡಾ. ಅಮರಶ್ರೀ ಎ. ಶೆಟ್ಟಿ
ಪ್ರಾಜೆಕ್ಟ್ ಸಂಘಟಕಿ

Exit mobile version