Site icon Ullalavani

ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಹಾಗೂ ಉಪಾಧ್ಯಕ್ಷರಾಗಿ ಐಯೂಬ್ ಮಂಚಿಲ ಆಯ್ಕೆ

ಉಳ್ಳಾಲ: ಉಳ್ಳಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿದ್ದು, ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಆಯೂಬ್ ಮಂಚಿಲ ಆಯ್ಕೆಯಾಗಿದ್ದು ಚುನಾವಣೆ ನಡೆದು ಎರಡು ವರ್ಷದ ಬಳಿಕ ನಗರಸಭೆಗೆ ಚುನಾಯಿತ ಆಡಳಿತ ಅಧಿಕಾರಕ್ಕೆ ಬಂದಂತಾಗಿದೆ.

ಉಳ್ಳಾಲ ನಗರಸಭೆ ಮತ್ತೆ ಅಧಿಕಾರಕ್ಕೆ ಕಾಂಗ್ರೆಸ್

  ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉಳ್ಳಾಲ ನಗರಸಭೆಯ 31 ಸ್ಥಾನಗಳಲ್ಲಿ  ಕಾಂಗ್ರೆಸ್ 13ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 6 , ಎಸ್‍ಡಿಪಿಐ 6,  ಜೆಡಿಎಸ್ 4 ಹಾಗೂ ಪಕ್ಷೇತರ ಇಬ್ಬರು ಸದಸ್ಯರಿದ್ದರು. ಅತೀ ಹೆಚ್ಚು ಸಂಖ್ಯಾಬಲವನ್ನು ಹೊಂದಿದ್ದರು ಕಾಂಗ್ರೆಸ್‍ಗೆ ಅಧಿಕಾರಕ್ಕೇರಲು ಸ್ಪಷ್ಟ ಬಹುಮತವಿರಲಿಲ್ಲ. ಅಧ್ಯಕ್ಷ , ಉಪಾಧ್ಯಕ್ಷ ಗಾದಿಯ ನೇಮಕಾತಿಯ ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕು ಉಂಟಾಗಿ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿ ಆಡಳಿತ ಚುನಾವಣೆ ವಿಳಂಬವಾಗಿತ್ತು. ಎರಡು ವರ್ಷಗಳ ಬಳಿಕ ಮೀಸಲಾತಿ ಪ್ರಕಟಿಸಿದ್ದು, ಕಾಂಗ್ರೆಸ್‍ಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ಬೆಂಬಲಿಸಿದ್ದರು.
 ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಚಿತ್ರಕಲಾ ಚಂದ್ರಕಾಂತ್‍ಗೆ ಕಾಂಗ್ರೆಸ್‍ನ 13 ಸದಸ್ಯರು ಮತ್ತು ಪಕ್ಷೇತರ ಅಭ್ಯರ್ಥಿ, ಶಾಸಕ ಯು.ಟಿ. ಖಾದರ್ ಮತ ಸೇರಿದಂತೆ 15 ಮತಗಳನ್ನು ಪಡೆದು ವಿಜಯಿಯಾದರೆ, ಬಿಜೆಪಿ ಅಭ್ಯರ್ಥಿ ರೇಷ್ಮಾ ಅವರಿಗೆ ಪಕ್ಷೇತರ ಅಭ್ಯರ್ಥಿ ಮತ್ತು ಮೂವರು ಜೆಡಿಎಸ್ ಸದಸ್ಯರ ಬೆಂಬಲದಿಂದ 10 ಮತಗಳನ್ನು ಪಡೆಯಲು ಸಾಧ್ಯವಾಯಿತು. ಜೆಡಿಎಸ್‍ನ ದಿನಕರ್ ಉಳ್ಳಾಲ್ ಅವರು ಮತ ಚಲಾಯಿಸದೆ ತಟಸ್ಥರಾದರೆ,  ಎಸ್‍ಡಿಪಿಐನ ಝರೀನಾ ಭಾನು 6 ಮತಗಳನ್ನು ಪಡೆದರು. ಅಧ್ಯಕ್ಷರಾಗಿ ಆಯ್ಕೆಯಾದ ಚಿತ್ರಕಲಾ ಚಂದ್ರಕಾಂತ್ ಎರಡನೇ ಬಾರಿಗೆ ಆಯ್ಕೆಯಾಗುತ್ತಿದ್ದು, ಈ ಹಿಂದೆ ನಗರ ಸಭೆಯ ಉಪಾಧ್ಯಕ್ಷರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಆಯೂಬ್ 14 ಮತಗಳನ್ನು ಪಡೆದು ಆಯ್ಕೆಯಾದರೆ, ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಬ್ಬಾರ್ ಬಿಜೆಪಿಯ 6 ಸದಸ್ಯರ ಬೆಂಬಲ ಮತ್ತು ಓರ್ವ ಪಕ್ಷೇತರನ ಬೆಂಬಲದೊಂದಿಗೆ 11 ಮತಗಳನ್ನು ಪಡೆಯಲು ಯಶಸ್ವಿಯಾದರು. ಎಸ್‍ಡಿಪಿಐಯ ಮಹಮ್ಮದ್ ರಮೀಝ್ 6 ಮತಗಳನ್ನು ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಸಿದ್ದ ಪಕ್ಷೇತರ ಅಭ್ಯರ್ಥಿ ಅಬ್ದುಲ್ ಅಝೀಝ್ ಉಪಾಧ್ಯಕ್ಷ ಸ್ಥಾನಕ್ಕೆ ಹಕ್ಕು ಚಲಾಯಿಸದೆ ತಟಸ್ಥರಾಗಿ ಉಳಿದರು. ಆಯೂಬ್ ಮಂಚಿಲ ಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
  ಚುನಾವಣಾಧಿಕಾರಿಯಾಗಿ ಮಂಗಳೂರು ಸಹಾಯ ಆಯುಕ್ತ ರವಿಚಂದ್ರ ನಾಯಕ್ ಅವರ ಸಮಕ್ಷಮದಲ್ಲಿ ಚುನಾವಣೆ ನಡೆಯಿತು. ಉಳ್ಳಾಲ ನಗರಸಭಾ ಮುಖ್ಯಾಧಿಕಾರಿ ರಾಯಪ್ಪ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಆಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸದೆ ತಟಸ್ಥರಾಗಿ ಉಳಿದ ಜೆಡಿಎಸ್ ಸದಸ್ಯ ದಿನಕರ ಉಳ್ಳಾಲ್ ಮಾತನಾಡಿ ಬಿಜೆಪಿ ಅಥವಾ ಇತರ ಯಾವುದೇ ಪಕ್ಷವನ್ನು ಬೆಂಬಲಿಸುವಂತೆ ಜಿಲ್ಲೆ ಅಥವಾ ರಾಜ್ಯದ ವರಿಷ್ಠರಿಂದ ಸೂಚನೆ ಬರಲಿಲ್ಲ. ಹಾಗೆಯೇ ಅಧ್ಯಕ್ಷ ಸ್ಥಾನ ಮಹಿಳೆಗೆ ಬಂದಿರುವುದರಿಂದ ನಮ್ಮ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರಿಗೂ ಅವಕಾಶ ಇರದ ಕಾರಣ ಮತ ಚಲಾಯಿಸಿಲ್ಲ ಎಂದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿದ ಶಾಸಕ ಯು.ಟಿ. ಖಾದರ್ ಮಾತನಾಡಿ ಉಳ್ಳಾಲ ನಗರಸಭೆಯನ್ನು ಎಲ್ಲಾ ಪಕ್ಷದ ಸದಸ್ಯರೊಂದಿಗೆ ಸೇರಿಕೊಂಡು ಉತ್ತಮ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿಯ ಕಡೆ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದರು.
* ಪಕ್ಷದ ಹಿರಿಯರ ತೀರ್ಮಾನದಂತೆ ಉಳ್ಳಾಲ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಾಧ್ಯವಾಗಿದ್ದು, ಶಾಸಕ ಯು.ಟಿ. ಖಾದರ್ ಮಾರ್ಗದರ್ಶನದೊಂದಿಗೆ ನಗರಸಭೆಯ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಉಳ್ಳಾಲ ನಗರವನ್ನು ಮಾದರಿ ನಗರವನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ. ಇದರೊಂದಿಗೆ ಸ್ವಚ್ಛ ಉಳ್ಳಾಲದೊಂದಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ
 ಚಿತ್ರಕಲಾ ಚಂದ್ರಕಾಂತ್ ನೂತನ ಅಧ್ಯಕ್ಷರು
 ಉಳ್ಳಾಲ ನಗರಸಭೆ

Exit mobile version