Site icon Ullalavani

ತೊಕ್ಕೊಟ್ಟು ಡೈವರ್ಷನ್ ಬದಲಾಯಿಸಿದ್ರೂ ನೆನಪಿಸುತ್ತಿದೆ ಲಾಕ್ ಡೌನ್ ಅಪಘಾತ

UN networks

ಉಳ್ಳಾಲ : ನವದಂಪತಿ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ನವಯುಗ ಸಂಸ್ಥೆ ಕಾಪಿಕಾಡು ಬಳಿ ರಾ.ಹೆ ಯ ಡಿವೈಡರ್ ತೆರವುಗೊಳಿಸಿ ಉಳ್ಳಾಲಕ್ಕೆ ಹೋಗುವ ವಾಹನಗಳಿಗೆ ವ್ಯವಸ್ಥೆ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿಂದೆ ಲಾಕ್ ಡೌನ್ ಸಂದರ್ಭ ಜು. 16 ರಂದು ಇದೇ ಡಿವೈಡರ್ ತೆರವುಗೊಳಿಸಿದ್ದರಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಅಪಘಾತ ನಡೆದಿತ್ತು. ಇದೀಗ ಮತ್ತೆ ಅಪಾಯವನ್ನು ಆಹ್ವಾನಿಸುವಂತಾಗಿದೆ.

ಜು.16 ರಂದು ನಡೆದ ಅಪಘಾತದಲ್ಲಿ ಚೆಂಬುಗುಡ್ಡೆ ನಿವಾಸಿಗಳಾದ ಚರಣ್ ಮತ್ತು ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಲಿ ಕಾರ್ಮಿಕರಾಗಿದ್ದ ಇಬ್ಬರು ಬೈಕಿನಲ್ಲಿ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ಮುಂದಿನಿಂದ ಇದ್ದ ಕಾರು ತೆರವುಗೊಳಿಸಿದ ಡಿವೈಡರ್ ಆಗಿ ತಿರುಗಲು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಕಾರು ಚಾಲಕ ಮಹಮ್ಮದ್ ಅಜ್ಮಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ವರದಿ ಬೆನ್ನಲ್ಲೇ ಮುಚ್ಚಿದರೂ ಮತ್ತೆ ತೆರವುಗೊಳಿಸಿದರು?
‘ಅವೈಜ್ಞಾನಿಕ ರಸ್ತೆ ತೆರವು ಶೀರ್ಷಿಕೆಯಡಿ ಕಾಪಿಕಾಡು ಭಾಗದಲ್ಲಿ ರಾ.ಹೆ 66 ರನ್ನು ಅವೈಜ್ಞಾನಿಕ ರೀತಿಯಲ್ಲಿ ತೆರವು ಮಾಡಲಾಗಿದೆ. ಈ ಕುರಿತು ಈ ಹಿಂದೆಯೇ ಮಾಧ್ಯಮಗಳು ಎಚ್ಚರಿಸಿದ್ದರೂ ತೆರವು ಮುಚ್ಚಲಾಗಿಲ್ಲ. ಇದು ಅಪಘಾತವನ್ನು ಆಹ್ವಾನಿಸುತ್ತಿದೆ ‘ ಸುದ್ದಿ ಹಿಂದೆ ಮಾಧ್ಯಮದಲ್ಲಿ ಪ್ರಕಟಗೊಂಡು ಡಿವೈಡರನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ತೆರವುಗೊಳಿಸಿ ಅಮಾಯಕ ದಂಪತಿ ಜೀವ ಬಲಿ ಪಡೆದುಕೊಂಡಂತೆ, ಇನ್ನಷ್ಟು ಜೀವಗಳನ್ನು ಬಲಿ ತೆಗೆಯಲು ರಾ.ಹೆ ಪ್ರಾಧಿಕಾರ ಮತ್ತು ನವಯುಗ ಸಂಸ್ಥೆ ತೆಗೆದುಕೊಂಡ ನಿರ್ಧಾರ ಅನ್ನುವ ಮಾತುಗಳು ಕೇಳಿ ಬರುತ್ತಿವೆ.

ಗಟ್ಟಿ ಸಮಾಜ ಭವನದ ಎದುರುಗಡೆ ತೆರವಿಗೆ ಒತ್ತಾಯ
ಕಾಪಿಕಾಡು ಪ್ರದೇಶ ಇಳಿಜಾರು ಪ್ರದೇಶವಾಗಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಭೇಟಿ ಸಂದರ್ಭದಲ್ಲೂ ಇಳಿಜಾರು ಪ್ರದೇಶದಿಂದ ಅಪಘಾತ ಸಂಭವಿಸುತ್ತಿದೆ ಅನ್ನುವುದನ್ನು ಉಲ್ಲೇಖಿಸಿದ್ದರು. ಅದಾಗ್ಯೂ ಕಾಪಿಕಾಡು ಇಳಿಜಾರು ರಸ್ತೆಯಾದರೂ ತೆರವುಗೊಳಿಸಿರುವುದು ನವಯುಗ ಸಂಸ್ಥೆ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತಿದೆ. ಎತ್ತರ ಭಾಗವಾದ ಕಾಪಿಕಾಡು ಗಟ್ಟಿ ಸಮಾಜ ಭವನದ ಎದುರುಗಡೆ ತೆರವು ನಡೆಸಿದರೆ ಅಪಘಾತಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು. ಆದರೂ ಕಾಪಿಕಾಡಿನಲ್ಲಿಯೇ ರಸ್ತೆ ತೆರವು ನಡೆಸಿರುವ ಕುರಿತು ವ್ಯಾಪಕ ಅಸಮಾಧಾನಗಳು ಕೇಳಿಬಂದಿದೆ. ಈ ಕುರಿತು ಸ್ಥಳೀಯ ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿಯುವ ಸೂಚನೆಯನ್ನು ವ್ಯಕ್ತಪಡಿಸಿದ್ದಾರೆ.

Exit mobile version