ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಇತ್ತೀಚೆಗೆ ಕಾಡುಗಳನ್ನು ನಾಶ ಮಾಡಿ ಕಾಂಕ್ರೀಟು ಕಟ್ಟಡಗಳೇ ಹೆಚ್ಚುತ್ತಿವೆ. ಅಲ್ಲದೆ ಪರಿಸರದ ಮೇಲೆ ನಾವು ಒಂದಲ್ಲ ಒಂದು ರೀತಿಯಲ್ಲಿ ಹಾನಿಯನ್ನು ಮಾಡುತ್ತಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರದ ಮಹತ್ವವನ್ನು ಅರಿತುಕೊಂಡು ವನಮಹೋತ್ಸವದಂತಹ ಕಾರ್ಯಕ್ರಮದ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕು ಎಂದು ಗೃಹ ರಕ್ಷಕ ದಳದ ಕಮಾಡೆಂಟ್ ಡಾ.ಮುರಲೀ ಮೋಹನ ಚೂಂತಾರು ಸಲಹೆ ನೀಡಿದರು.
ಅವರು ಶ್ರೀ ನಾಗಬ್ರಹ್ಮ ಭಜನಾ ಮಂಡಲಿ ಪಟ್ಟೋರಿ ಹಾಗೂ ನಿಟ್ಟೆ ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಪಟ್ಟೋರಿಯಲ್ಲಿ ಭಾನುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೊಣಾಜೆ ಬೀಡಿನ ತಿರುಮಲೇಶ್ವರ ಭಟ್ ಹಾಗೂ ಹಿರಿಯರಾದ ರಘುರಾಮ ಕಾಜವ ಅವರು ಗಿಡವನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ವನ್ಯ ಜೀವಿ ಪರಿಪಾಲಕರಾದ ಕಿರಣ್ ಬುಡ್ಲೆಗುತ್ತು, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕೊಣಾಜೆ ಪೊಲೀಸ್ ಇನ್‍ಸ್ಪೆಕ್ಟರ್ ರಾಘವ ಎಸ್.ಪಡೀಲ್, ವೃಕ್ಷ ಪ್ರೇಮಿ ಕೃಷ್ಣಪ್ಪ, ರಾಮ್‍ಮೋಹನ್, ಲೋಹಿತ್ ತಲಪಾಡಿ, ದಿವಾಕರ ಭಂಡಾರಿ, ಶ್ರೀನಿವಾಸ ಕಾಜವ, ಪಂಚಾಯಿತಿ ಸದಸ್ಯರಾದ ಗಣೇಶ್, ರವೀಂದ್ರ, ಬಬಿತ ಹಾಗೂ ನಾಗಬ್ರಹ್ಮ ಭಜನಾ ಮಂಡಲಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೇವಸ್ಥಾನದಿಂದ ಅಸೈಗೋಳಿಯವರೆಗೆ ಸುಮಾರು ನೂರು ಗಿಡಗಳನ್ನು ರಸ್ತೆ ಬದಿಯಲ್ಲಿ ನೆಡಲಾಯಿತು.