ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ಒಂದೆಡೆ ಕಂಬಳ ಕೋಣಗಳ ಓಟ, ಇನ್ನೊಂದೆಡೆ ಮಕ್ಕಳು ಸೇರಿದಂತೆ ಯುವಕ ಯುವತಿಯರು, ಹಿರಿಯರು ಯಾವುದೇ ಬೇಧವಿಲ್ಲದೆ, ಕೆಸರು ಗದ್ದೆಯಲ್ಲಿ ಕಂಬಳದ ಕೋಣಗಳಿಗೆ ಸರಿಸಾಟಿಯೆಂಬತೆ ಓಟ, ತೆಂಗಿನ ಗರಿಗಳಲ್ಲಿ ಕುಳ್ಳಿರಿಸಿ ಎಳೆಯುವ ದೃಶ್ಯ, ಹೆಗಲ ಮೇಲೆ ಒಬ್ಬರನ್ನೊಬ್ಬರು ಕುಳ್ಳಿರಿಸಿ ಗುರಿ ಮುಟ್ಟುವ ಧಾವಂತ, ಓಡುವ ಭರದಲ್ಲಿ ಕೆಸರಲ್ಲಿ ಮುಳುಗಿ ಏಳುವ ದೃಶ್ಯ , ಇನ್ನೊಂದೆಡೆ ತೋಳು ಬಲ ಪ್ರದರ್ಶನದ ಹಗ್ಗ ಜಗ್ಗಾಟ, ಮಹಿಳೆಯರ ನಾಟಿ ಸಂದರ್ಭದಲ್ಲಿ ಹೇಳು ಪಾಡ್ದನಗಳ ನಡುವೆ ಧ್ವನಿ ವರ್ಧಕದಲ್ಲಿ ಕಾರ್ಯಕ್ರಮ ಸಂಯೋಜಕರ ಹುರಿದುಂಬಿಸುವ ಮಾತುಗಳು ಇದು ತಲಪಾಡಿ ದುರ್ಗಾ ಪರಮೇಶ್ವರೀ ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಭಾನುವಾರ ಕಂಡು ಬಂದ ದೃಶ್ಯ.
ದೇವೆರೆ ಬಾಕಿಲ್ದ ಕಂಡಡೊಂಜಿ ದಿನ ಗ್ರಾಮೀಣ ಕ್ರೀಡಾಕೂಟದಲ್ಲಿ ಹಿರಿಯರು ಕಿರಿಯರು ಎನ್ನದೆ ದಿನವಿಡೀ ಕಿನ್ಯ, ಕೋಟೆಕಾರು, ತಲಪಾಡಿ ಗ್ರಾಮಗಳ ಜನರು ಕೆಸರಲ್ಲಿ ಮಿಂದೆದ್ದು ಸಂತಸಗೊಂಡರು. ಬೆಳಗ್ಗಿನಿಂದ ಪ್ರಾರಂಭಗೊಂಡಿದ್ದ ಕಾರ್ಯಕ್ರಮ ಸಂಜೆವರೆಗೂ ಮುಂದುವರೆದಿತ್ತು. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಪಂಜಾಳ ಚಾಲನೆ ನೀಡಿದರು. ದೇವಿಪುರ ತಲಪಾಡಿಯ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮ್ ಮನೋಹರ್ ರೈ ತಲಪಾಡಿ ದೊಡ್ಡಮನೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೊಟ್ಯಾನ್, ಅಲಂಕಾರಗುಡ್ಡೆ ತಲಪಾಡಿಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಪಾತ್ರಿ ಜಯರಾಮ ಯಾನೆ ಅಂತ ಪೂಜಾರಿ, ಮಾಜಿ ಶಾಸಕ ಜಯರಾಮ ಶೆಟ್ಟಿ, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಉಪಾಧ್ಯಕ್ಷೆ ಜಯಲಕ್ಷ್ಮಿ, ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಬಿ. ರವೀಂದ್ರನಾಥ ರೈ, ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರದ ವ್ಯವಸ್ಥಾಪನಾಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಕ್ಯಾಪ್ಟನ್ ಮಾಧವ ಶೆಟ್ಟಿ, ಶ್ರೀ ರಕ್ತೇಶ್ವರೀ ದೈವಸ್ಥಾನ ಸೋಮೇಶ್ವರ ಇದರ ಪ್ರ. ಕಾರ್ಯದರ್ಶಿ ರಾಮ್ ದಾಸ್ ಸೋಮೇಶ್ವರ, ಬಾಬು ಶ್ರೀಶಾಸ್ತ ಕಿನ್ಯ ಭಾಗವಹಿಸಿದ್ದರು.
ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ ಸ್ವಾಗತಿಸಿದರು. ಗೋಪಾಲಕೃಷ್ಣ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ಕಿಲ್ಲೆ ವಂದಿಸಿದರು.