Site icon Ullalavani

ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ರಾಜೇಶ್ ಎ. ಉಚ್ಚಿಲ್, ಉಪಾಧ್ಯಕ್ಷರಾಗಿ ಸುಶೀಲ ಎಸ್, ನಾಯಕ್ ಆಯ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ರಾಜೇಶ್ ಎ. ಉಚ್ಚಿಲ್ ಜಯಗಳಿಸಿದ್ದು, ಉಪಾಧ್ಯಕ್ಷರಾಗಿ ಸುಶೀಲ ಎಸ್. ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 61 ಸದಸ್ಯರಿದ್ದು, ಬಿಜೆಪಿ ಬೆಂಬಲಿತ 45, ಕಾಂಗ್ರೆಸ್ ಬೆಂಬಲಿತ 12, ಸಿಪಿಐಎಂ 1, ಮೂವರು ಪಕ್ಷೇತರರಿದ್ದು , ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರಾಜೇಶ್ ಉಚ್ಚಿಲ್ ಅವರು 46 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಸದಸ್ಯ ದೀಪಕ್ ಪಿಲಾರ್13 ಮತಗಳನ್ನು ಪಡೆದರು. ಕಾಂಗ್ರೆಸ್‍ನ ಓರ್ವ ಸದಸ್ಯರು ಗೈರು ಹಾಜರಾಗಿದ್ದರೆ. ಬಿಜೆಪಿಯ ಓರ್ವ ಸದಸ್ಯರು ಅನಾರೋಗ್ಯ ಕಾರಣದಿಂದ ಮತದಾನದಲ್ಲಿ ಭಾಗವಹಿಸಿರಲಿಲ್ಲ.

ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ರಾಜೇಶ್ ಎ.ಉಚ್ಚಿಲ್ ಕಳೆದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು , ಈ ಬಾರಿ ನಡೆದ ಚುನಾವಣೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಅಲ್ಪಸಂಖ್ಯಾತ ಪ್ರಾಬಲ್ಯದ ಉಚ್ಚಿಲ ಸಂಕೊಳಿಗೆಯಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷನೀಯ. ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಶೀಲ ಎಸ್. ನಾಯಕ್ ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಶೇಖರ್‍ಉಚ್ಚಿಲ್, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಪರಿಷತ್ ಸದಸ್ಯ ಸೀತಾರಾಮ ಬಂಗೇರ, ಮುಖಂಡರಾದ ಬಾಬು ಬಂಗೇರ, ಲಕ್ಷ್ಮಣ ಅಬ್ಬಕ್ಕ ನಗರ ಸಂಜೀವ ಶೆಟ್ಟಿ ಅಂಬ್ಲಮೊಗರು, ಚಂದ್ರಹಾಸ್ ಅಡ್ಯಂತಾಯ ಕುತ್ತಾರುಗುತ್ತು, ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಯಶವಂತ ಅಮೀನ್, ಮೋಹನ್‍ದಾಸ್ ಶೆಟ್ಟಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

Exit mobile version