Site icon Ullalavani

ಮುನ್ನೂರು ಪಂಚಾಯತ್: ಬಿಜೆಪಿ ತೆಕ್ಕೆಗೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುನ್ನೂರು : ಅತಂತ್ರ ಸ್ಥಿತಿಯಲ್ಲಿದ್ದ ಮುನ್ನೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ‘ಕೈ’ ಕೊಟ್ಟ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ತನ್ನದಾಗಿಸುವ ಮೂಲಕ ಪ್ರಾಬಲ್ಯವನ್ನು ಮೆರೆದಿದೆ.

ಬಿಜೆಪಿ ಬೆಂಬಲಿತ ಸದಸ್ಯರಾದ ರೂಪಾ.ಡಿ.ಶೆಟ್ಟಿ ಅಧ್ಯಕ್ಷರಾಗಿ , ಹರೀಶ್ ಭಂಡಾರಬೈಲು ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ. ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ೧೦ ಬಿಜೆಪಿ ಹಾಗೂ ೧೦ ಕಾಂಗ್ರೆಸ್ ಹಾಗೂ ೩ ಸಿಪಿಐಎಂ ಬೆಂಬಲಿತರು ಜಯಗಳಿಸಿದ್ದರು. ಸಿಪಿಐಎಂನ ಮೂವರು ಸದಸ್ಯರು ನಿರ್ಣಾಯಕರಾಗಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ರೂಪಾ.ಡಿ ಶೆಟ್ಟಿ ೨೩ ರಲ್ಲಿ ೧೨ ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಪುಷ್ಪಲತಾ ಅಂಚನ್ ೧೧ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹರೀಶ್ ಭಂಡಾರಬೈಲು ೧೨ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಇಜಾಝ್ ಮದನಿನಗರ ೧೧ ಮತಗಳನ್ನು ಪಡೆದು ಸೋಲನ್ನಪ್ಪಿದ್ದರು.

ಅನಿರೀಕ್ಷಿತ ಗೆಲುವು: ಅತಂತ್ರ ಸ್ಥಿತಿಯಲ್ಲಿದ್ದ ಮುನ್ನೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲುವ ಸೂಚನೆಯಿತ್ತು. ಚುನಾವಣೆ ಆರಂಭದ ವೇಳೆಯೂ ಕಾಂಗ್ರೆಸ್ನ ಇಬ್ಬರು ಸದಸ್ಯರಿಗೂ ಕೆಲ ಮುಖಂಡರು ಶುಭವನ್ನು ಹಾರೈಸುವ ಮೂಲಕ, ಇಬ್ಬರ ಮುಖದಲ್ಲಿಯೂ ಗೆಲ್ಲುವ ಮಂದಹಾಸವಿತ್ತು. ಆದರೆ ಕಾಂಗ್ರೆಸ್ ಬೆಂಬಲಿತರ ನಡುವೆ ಇದ್ದ ಭಿನ್ನಮತ ಅವರ ನಿರೀಕ್ಷೆಯನ್ನೇ ಹುಸಿಯಾಗಿಸಿತು. ಚುನಾವಣೆಯಲ್ಲಿ ಕಾಂಗ್ರೆಸ್ನ ಇಬ್ಬರು ‘ಕೈ’ ಕೊಟ್ಟು ಬಿಜೆಪಿ ಸದಸ್ಯರಿಗೆ ಮತ ಚಲಾಯಿಸಿದ ಪರಿಣಾಮ ಮುನ್ನೂರು ಪಂಚಾಯಿತಿ ಆಡಳಿತ ಬಿಜೆಪಿ ಪಾಲಾಯಿತು. ಕಾಂಗ್ರೆಸ್ನ ಇಬ್ಬರ ಪಲಾಯನಕ್ಕೆ ವಾರದಿಂದ ಬಿಜೆಪಿಗರು ಆಪರೇಷನ್ ಕಮಲವನ್ನು ನಡೆಸಿರುವ ವಿಚಾರ ಕಾಂಗ್ರೆಸ್ ಪಾಳಯದಿಂದ ಕೇಳಿಬಂದಿದೆ.

ಈ ಸಂದರ್ಭ ಜಿ.ಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಚಂದ್ರಹಾಸ ಅಡ್ಯಂತಾಯ, ಬಿಜೆಪಿ ಮುನ್ನೂರು ಘಟಕದ ಅಧ್ಯಕ್ಷ ರಾಜೇಶ್ ಗಟ್ಟಿ ಮುಂಡೋಳಿ, ಯಶವಂತ ಅಮೀನ್, ದಯಾನಂದ ತೊಕ್ಕೊಟ್ಟು, ಪಂ. ಸದಸ್ಯ ಬಾಬು ಶೆಟ್ಟಿ, ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version