Site icon Ullalavani

ತಲಪಾಡಿ ಪಂ.ಅಧ್ಯಕ್ಷ-ಉಪಾಧ್ಯಕ್ಷ ಬಿಜೆಪಿ ತೆಕ್ಕೆಗೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ : ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಯು ತನ್ನದಾಗಿಸಿಕೊಂಡಿದ್ದು, ಹಿಂದೆ ಉಪಾಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸುರೇಶ್ ಆಳ್ವ ಅಧ್ಯಕ್ಷರಾಗಿ ಹಾಗೂ ಅದೇ ಪಕ್ಷದ ಜಯಲಕ್ಷ್ಮೀ.ಟಿ. ಉಪಾಧ್ಯಕ್ಷೆಯಾಗಿ ಬುಧವಾರ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು.

ತಲಪಾಡಿ ಪಂ.ಗೆ ನಡೆದ ಚುನಾವಣೆಯಲ್ಲಿ ೨೪ ವಾರ್ಡುಗಳಲ್ಲಿ ೧೨ ಬಿಜೆಪಿ ಬೆಂಬಲಿತ, ೯ ಕಾಂಗ್ರೆಸ್ ಬೆಂಬಲಿತ ಹಾಗೂ ೩ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಬುಧವಾರ ಅಧ್ಯಕ್ಷ ಹುದ್ದೆಗೆ ನಡೆದ ಸುರೇಶ್ ಆಳ್ವ ಅವರಿಗೆ ಕಾಂಗ್ರೆಸ್ನ ವೈಭವ್ ಶೆಟ್ಟಿ ಎದುರಾಳಿಯಾಗಿ ನಿಂತಿದ್ದರು. ಸುರೇಶ್ ಅವರು ೧೪ ಸದಸ್ಯರ ಬೆಂಬಲ ಪಡೆದುಕೊಂಡು ಜಯಗಳಿಸಿದರೆ , ವೈಭವ್ ಶೆಟ್ಟಿ ೧೦ ಮಂದಿಯ ಬೆಂಬಲವನ್ನು ಪಡೆದುಕೊಂಡರು. ವಿಶೇಷವೆಂದರೆ ಮೂವರು ಪಕ್ಷೇತರರಲ್ಲಿ ಇಬ್ಬರು ಕಾಂಗ್ರೆಸ್ ಪರವಾಗಿದ್ದರೆ, ಓರ್ವ ಮಾತ್ರ ಬಿಜೆಪಿ ಪರವಾಗಿದ್ದರು. ಆದರೆ ಕಾಂಗ್ರೆಸ್ನ ಓರ್ವ ಸದಸ್ಯರು ಅಡ್ಡ ಮತ ಚಲಾಯಿಸಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಹಿನ್ನೆಡೆಯಾಯಿತು. ಉಪಾಧ್ಯಕ್ಷೆ ಸ್ಥಾನಕ್ಕೆ ಜಯಲಕ್ಷ್ಮೀ.ಟಿ ಅವರಿಗೆ ೧೩ ಸದಸ್ಯರ ಬೆಂಬಲ ಪಡೆದುಕೊಂಡು ಆಯ್ಕೆಯಾದರೆ, ಅವರಿಗೆ ಎದುರಾಳಿಯಾಗಿದ್ದ ಕಾಂಗ್ರೆಸ್ ನ ಜೈಬುನ್ನೀಸಾ ಪಾಟೀಲ್ ೧೧ ಮಂದಿಯ ಬೆಂಬಲ ಪಡೆದುಕೊಂಡು ಉಪಾಧ್ಯಕ್ಷೆ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾದರು.

ನೋಡೆಲ್ ಅಧಿಕಾರಿಯಾಗಿ ಶಿಕ್ಷಣಾಧಿಕಾರಿ ಜ್ಞಾನೇಶ್ ಭಾಗವಹಿಸಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜೇಶ್.ಎ.ಉಚ್ಚಿಲ್, ಮೋಹನದಾಸ್ ಶೆಟ್ಟಿ ಕಿನ್ಯಾ, ಸಂಜೀವ ಶೆಟ್ಟಿ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.

Exit mobile version