Site icon Ullalavani

ದೇರಳಕಟ್ಟೆ: ನಿಟ್ಟೆ ವಿಶ್ವವಿದ್ಯಾಲಯದಲ್ಲಿ ವೈದ್ಯರ ದಿನಾಚರಣೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ವೈದ್ಯಕೀಯ ಸೇವೆಯುದ್ದಕ್ಕೂ ಮಾನವೀಯತೆಯ ಮೌಲ್ಯವನ್ನು ಸಾರಿದ ಡಾ.ಬಿ.ಸಿ.ರಾಯ್ ಅವರ ಕಾರ್ಯವೈಖರಿ ಎಲ್ಲಾ ವೈದ್ಯರಿಗೂ ಮಾದರಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

ಡಾ. ಬಿ.ಸಿ.ರಾಯ್ ಜನ್ಮ ದಿನದ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸೆಮಿನಾರ್ ಹಾಲ್ನಲ್ಲಿ ಬುಧವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯನಾಗಿದ್ದುಕೊಂಡು ರಾಜಕೀಯ ನೇತಾರನಾಗಿದ್ದ ಡಾ.ಬಿ.ಸಿ.ರಾಯ್ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನ ವೃದ್ಧಿಸಿಕೊಂಡವರು. ನ್ಯಾಯಯುತವಾಗಿ ಬಾಳಿದ ಅವರು ಜನರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿಯೂ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರನ್ನು ಮಾದರಿಯಾಗಿಸಿಕೊಂಡು ವೈದ್ಯರಾದರು ತಾವು ನೀಡುವ ಸೇವೆಯಿಂದ ರೋಗಿ ಗುಣಮುಖನಾದರೆ ಅವರಿಗೆ ಅದರಿಂದ ಸಿಗುವ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಬೇರೆ ಎಲ್ಲ ಸಂಪತ್ತಿಗಿಂತ ದೊಡ್ಡದು ಎಂಬುದನ್ನು ಅರಿತುಕೊಳ್ಳಬೇಕಿದೆ. ವೈದ್ಯಕೀಯ ಲೋಕದಲ್ಲಿ ರೋಗಿಗಳಿಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯಿಂದ ವೈದ್ಯ ದಿನಾಚರಣೆಯಲ್ಲಿ ಸನ್ಮಾನಗೊಂಡ ಖ್ಯಾತ ವೈದ್ಯರಾದ ಡಾ.ಡಿ.ಕೆ.ಶ್ರೀನಿವಾಸ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಡಾ.ಕೆ.ಪಿ.ಹೊಳ್ಳ ಅವರು ಜನಪ್ರಿಯರಾಗಲು ಸಾಧ್ಯವಾಯಿತು ಎಂದರು.

ರೋಗಿಗಳ ಸೇವೆ ಮಾಡುವ ಮೂಲಕ ವೈದ್ಯರು ಜನರಿಗೆ ಹತ್ತಿರವಾಗುತ್ತಾರೆ. ಮುಂದೆ ಯಾವುದೇ ಕಾರಣದಿಂದ ಅವರು ವೃತ್ತಿಯಿಂದ ನಿವೃತ್ತರಾಗುವ ಅಥವಾ ಸೇವೆ ಮಾಡಲು ಅಸಾಧ್ಯವಾದಾಗ ಜನರು ಮಾತ್ರ ಅವರ ಸೇವೆಯನ್ನು ಮತ್ತೂ ನಿರೀಕ್ಷಿಸುತ್ತಾರೆ. ಅಂತಹ ಭಾಗ್ಯ ವೈದ್ಯಕೀಯ ಸೇವೆಯಂತಹ ಕೆಲವೇ ಕೆಲವು ವೃತ್ತಿಗಳಲ್ಲಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್. ರಮಾನಂದ ಶೆಟ್ಟಿ ಹೇಳಿದರು.

ಡಾ.ಡಿ.ಕೆ.ಶ್ರೀನಿವಾಸ್ ಹಾಗೂ ಡಾ.ಕೆ.ಪಿ.ಹೊಳ್ಳ ಸನ್ಮಾನಕ್ಕೆ ಪ್ರತಿಯಾಗಿ ವೈದ್ಯಕೀಯ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು.

ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಡಾ. ಹರ್ಷ ಕಾರ್ಯಕ್ರಮ ನಿರೂಪಿಸಿದರು. ವೈಸ್ ಡೀನ್ ಡಾ. ಅಮೃತ್ ಮಿರಾಜ್ಕರ್ ವಂದಿಸಿದರು.

ಹಳ್ಳಿಗಳನ್ನೇ ರೆಸಾರ್ಟ್ ಮಾಡಿಕೊಳ್ಳಿ
ವೈದ್ಯರು ರೆಸಾರ್ಟ್ಗಳಲ್ಲಿ ತಮ್ಮ ರಜಾ ಅವಧಿಯನ್ನು ಕಳೆಯುವ ಬದಲು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅವುಗಳನ್ನೇ ರೆಸಾರ್ಟ್ಗಳೆಂದು ಭಾವಿಸಿ ತಿಂಗಳ ಕಾಲ ಹಳ್ಳಿ ಜೀವನದಲ್ಲಿ ಪಾಲ್ಗೊಂಡು ಅಲ್ಲಿನ ಜನರ ಸೇವೆಯಲ್ಲಿ ತೊಡಗಿಕೊಂಡಲ್ಲಿ ಬಡ ಜನರ ಸೇವೆಯಲ್ಲಿ ಪಾಲ್ಗೊಂಡಂತಾಗುತ್ತದೆ. ತಮ್ಮ ಸೇವಾ ಅವಧಿಯಲಿ ಸಿಕ್ಕ ಕಡಿಮೆ ಖರ್ಚಿನ ಸೊತ್ತುಗಳಲ್ಲಿ ಜನರ ಸೇವೆಯಲ್ಲಿ ತೊಡಗಿಕೊಂಡ ಅನುಭವ ಹಂಚಿಕೊಂಡ ಫ್ಲೈಟ್ ಲೆಫ್ಟಿನೆಂಟ್ ಡಾ.ಕೆ.ಪಿ.ಹೊಳ್ಳ ಅವರು ಪ್ರಸ್ತುತ ನೂತನ ತಂತ್ರಜ್ಞಾನಗಳುಳ್ಳ ಚಿಕಿತ್ಸೆ ಎಲ್ಲಾ ವರ್ಗದವರಿಗೂ ಸಿಗಬೇಕಾದರೆ ವೈದ್ಯರು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

Exit mobile version