UN NETWORKS
ಉಳ್ಳಾಲ : ಮಂಗಳೂರು ಕ್ಷೇತ್ರದಲ್ಲಿ ಭರಪೂರ ಅಭಿವೃದ್ಧಿ ಆಗಿದ್ದು ಕ್ಷೇತ್ರ ವ್ಯಾಪಿ ಚತುಷ್ಪಥ ರಸ್ತೆಯಿಂದ ಗ್ರಾಮೀಣ ಭಾಗವೂ ಈಗ ನಗರಕ್ಕೆ ಸಮನಾಗಿ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರದ ನರಿಂಗಾನ ಗ್ರಾಮ ಪಂಚಾಯಿತಿ ಕಚೇರಿ, ತೌಡುಗೋಳಿ ಕ್ರಾಸ್‍ನಿಂದ ಮುಡಿಪು ಜಂಕ್ಷನ್‍ತನಕ ನಡೆಯುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಂಗಳೂರು ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಜನಸಾಮಾನ್ಯರಿಗೆ ಉತ್ತಮ ರಸ್ತೆ ವ್ಯವಸ್ಥೆ ಮಾಡಿಕೊಡುವುದು ನನ್ನ ಪ್ರಮುಖ ಗುರಿ. ಅದರಲ್ಲಿ ತೊಕ್ಕೊಟ್ಟು ಜಂಕ್ಷನ್‍ನಿಂದ ನಾಟೆಕಲ್ ಜಂಕ್ಷನ್ ತನಕ ಚತುಷ್ಪಥ ರಸ್ತೆಗೆ ಕೇಂದ್ರದ ಎನ್ ಎಚ್‍ನವರಲ್ಲಿ ಕೇಳಿಕೊಂಡಾಗ ಸಹಕಾರ ಸಿಗಲಿಲ್ಲ. ನನ್ನ ಕ್ಷೇತ್ರದಲ್ಲಿ ಸದ್ಯ 30ಕೋಟಿ ರೂ. ಗಳ ಯೋಜನೆ ಹಾಕಿಕೊಂಡಿದ್ದು ಅದರಲ್ಲಿ ದೇರಳಕಟ್ಟೆ ಜಂಕ್ಷನ್‍ನಿಂದ ಕುತ್ತಾರು ಜಂಕ್ಷನ್ ತನಕ ಈಗಾಗಲೇ 12ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಆಗಿದೆ.
ಕುತ್ತಾರು ಜಂಕ್ಷನ್‍ನಿಂದ ತೊಕ್ಕೊಟ್ಟು ಜಂಕ್ಷನ್ ತನಕ 14ಕೋಟಿ ರೂ. ವೆಚ್ಚದಲ್ಲಿ ಬಿಡುಗಡೆ ಮಾಡಿದ್ದು ರಸ್ತೆ ನಿರ್ಮಾಣವಾಗಲಿದೆ ಎಂದರು.
ನಾಟೆಕಲ್‍ನಿಂದ ಮುಡಿಪು ಜಂಕ್ಷನ್-ನವೋದಯ ಶಾಲೆ ಮೂಲಕ ಕೇರಳ ಸಂಪರ್ಕಿಸುವ ನಾಟೆಕಲ್- ಮಂಜನಾಡಿ- ಹೂ ಹಾಕುವ ಕಲ್ಲು -ಮುಡಿಪು ರಸ್ತೆಯನ್ನು ಈಗಾಗಲೇ ದ್ವಿಪಥ ರಸ್ತೆಯನ್ನಾಗಿ ನಿರ್ಮಿಸಲಾಗಿದ್ದು ಮತ್ತೆ 12ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕೆಲವೊಂದು ಜಂಕ್ಷನ್ ಅಭಿವೃದ್ಧಿ ಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡಿ ಅತ್ಯುತ್ತಮ ಸುಸಜ್ಜಿತ ರಸ್ತೆ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗಲಿದ್ದು ಸರ್ವೆ ನಡೆಯುತ್ತಿದೆ ಎಂದರು.
ಕೋಟೆಕಾರಿನಿಂದ ಉಳ್ಳಾಲ ಸೋಮೇಶ್ವರ ದೇವಸ್ಥಾನ, ಉಳ್ಳಾಲ ಬೀಚ್, ಸಯ್ಯದ್ ಮದನಿ ದರ್ಗಾ, ಸಂತ ಸೆಬೆಸ್ಟಿಯನ್ ಚರ್ಚ್ ಸಂಪರ್ಕಿಸುವ ರಸ್ತೆಯನ್ನು ಈಗಾಗಲೇ ಡಾಮರೀಕರಣ ಮಾಡಿದ್ದೇವೆ. ಕೋಟೆಕಾರು ಹೈವೇಯಿಂದ ಸೋಮೇಶ್ವರ ದೇವಸ್ಥಾನ ಅಬ್ಬಕ್ಕ ಸರ್ಕಲ್ ತನಕದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತನೆ ಮಾಡಲು ಏಳು ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್ ಆಗಿದೆ. ಆ ಕೆಲಸ ಕೂಡಾ ಪ್ರಾರಂಭ ಆಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅನುದಾನದಿಂದ ವರ್ಷದ ಹಿಂದೆಯೇ 31ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಟೆಂಡರ್ ಆಗಿದ್ದು ಕೆಲಸ ಪ್ರಾರಂಭವಾಗಲಿದೆ. ಅದಕ್ಕಿಂತ ಮುಂಚಿತವಾಗಿ ಕ್ಷೇತ್ರವ್ಯಾಪಿ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಹಾಗೂ ಊರ ಹಿರಿಯ ಕಿರಿಯ ನಾಯಕರು ಸೇರಿಕೊಂಡು ರಸ್ತೆ ಅಭಿವೃದ್ಧಿ ನಡೆಸುವಾಗ ಎಂಜಿನಿಯರ್‍ಗಳು ಯಾವ ರೀತಿ ಯೋಜನೆ ಹಾಕಿಕೊಂಡಿದ್ದಾರೆ ಅದು ಜನಸಾಮಾನ್ಯರಿಗೂ ಗೊತ್ತಾಗಬೇಕು. ಫುಟ್‍ಪಾತ್, ಚರಂಡಿ ಎಲ್ಲಿ ಅಗತ್ಯ ಮೊದಲಾದ ಸ್ಥಳೀಯರ ಬೇಡಿಕೆ ಏನಿದೆ ಅದು ಅ„ಕಾರಿಗಳಿಗೆ ಗೊತ್ತಾಗಬೇಕು, ಕೆಲವು ಭಾಗದಲ್ಲಿ ರಸ್ತೆಗೆ ಜಾಗ ಬೇಕಾದಲ್ಲಿ ಸ್ಥಳದ ಮಾಲೀಕರಲ್ಲಿ ಕೇಳಿಕೊಳ್ಳಬೇಕು. ಅ„ಕಾರಿಗಳು, ಜನಪ್ರತಿನಿ„ಗಳು, ಗುತ್ತಿಗೆದಾರರು ಒಟ್ಟಿಗೆ ಕೆಲಸ ಮಾಡುವ ನೆಲೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ ರಸ್ತೆ:
ಮಂಗಳೂರು ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ತೊಕ್ಕೊಟ್ಟು ರೈಲ್ವೇ ಮೇಲ್ಸೇತುವೆ ತನಕ ರಸ್ತೆ ಅಗಲೀಕರಣ ಮಾಡಿ ಒಳಚರಂಡಿ ಹಾಗೂ ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲು ಮತ್ತೆ 9ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಟೆಂಡರ್ ಕರೆದಾಗಿದೆ. ಅಬ್ಬಕ್ಕ ಸರ್ಕಲ್‍ನಿಂದ ಉಳ್ಳಾಲ ಕೋಡಿ ರಸ್ತೆಗೆ ಐದು ಕೋಟಿ ರೂ. ಅನುದಾನ ಬಿಡುಗಡೆ ಆಗಿ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಲಿದೆ. ಅಂಬ್ಲಮೊಗರಿನ ಬರುವಾದಿಂದ ದೇರಳಕಟ್ಟೆ ಜಂಕ್ಷನ್ ಸಂಪರ್ಕಿಸುವ ರಸ್ತೆಗೆ ಒಂದೂವರೆ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಂಬ್ಳಪದವು- ವಿವಿ ರಸ್ತೆ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಆಗಲಿದೆ.
ಬೃಹತ್ ಸಂಸ್ಥೆಗಳ ಸಹಕಾರ:
ಕಂಬ್ಳಪದವಿನ ಇನ್‍ಫೋಸಿಸ್ ಸಂಸ್ಥೆ ಕಂಬ್ಳಪದವಿನಿಂದ ಮುಡಿಪು ತನಕದ ಒಂದು ಹಂತದ ಸುಂದರ ಚತುಷ್ಪಥ ರಸ್ತೆ ಮಾಡಿಕೊಟ್ಟಿದ್ದಾರೆ. ದೇರಳಕಟ್ಟೆ ಕುತ್ತಾರು ದ್ವಿಪಥ ರಸ್ತೆಯಲ್ಲಿ ನಿಟ್ಟಿ ವಿವಿ ಹಾಗೂ ಯೇನೆಪೊಯ ವಿವಿ ಸುಂದರ ರಸ್ತೆ ದೀಪ ಒದಗಿಸಿಕೊಟ್ಟಿದ್ದಾರೆ. ಎಲ್ಲರ ಸಹಕಾರದಿಂದ ನನ್ನ ಕ್ಷೇತ್ರದ ಉದ್ದಗಲಕ್ಕೂ ಒಂದು ಮಾದರಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದ್ದು ಜನಸಾಮಾನ್ಯರಿಗೆ ಬಹಳಷ್ಟು ಉಪಕಾರವಾಗಲಿದೆ.
ಚತುಷ್ಪಥ ರಸ್ತೆ, 24ಗಂಟೆ ಕುಡಿಯುವ ನೀರು, ನಗರದಲ್ಲಿ ನೆಲೆಸುವ ಕನಸಿಗೆ ಬ್ರೇಕ್:
ಗ್ರಾಮೀಣ ಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗುವುದರ ಮೂಲಕ ಮಂಗಳೂರಿನಿಂದ ಕೊಣಾಜೆ, ಮೊಂಟೆಪದವು ಜಂಕ್ಷನ್‍ಗಳಿಗೆ ಗರಿಷ್ಠ ಇಪತ್ತು ನಿಮಿಷದ ಪ್ರಯಾಣ. ಅಷ್ಟು ಕಡಿಮೆ ಅವ„ಯ ಪ್ರಯಾಣದಲ್ಲಿ ಮನೆ ತಲುಪುವುದಾದರೆ ಗ್ರಾಮೀಣ ಭಾಗದ ಜನರು ನಗರದಲ್ಲಿ ನೆಲೆಸುವ ಯೋಚನೆಯಿಂದ ದೂರವಾಗ್ತಾರೆ. ನಗರದ ಅಷ್ಟು ದುಬಾರಿ ಬದುಕಿನ ಕನಸು ಬಿಡುತ್ತಾರೆ. ಅದಕ್ಕೆ ಮೂಲ ಅವಶ್ಯಕತೆ ಈಡೇರಿಸುವ ಪ್ರಯತ್ನ ನಡೆಯುತ್ತಿದೆ. ಅವರು ಗ್ರಾಮೀಣ ಭಾಗದಲ್ಲಿಯೇ ಕುಟುಂಬದೊಂದಿಗೆ ಸುಂದರ ಬಾಳು ನಡೆಸುವಂತಹ ಅವಕಾಶ ಸಿಗಲಿದೆ. ಗ್ರಾಮೀಣ ಭಾಗದ ಜನರ ನಗರದ ಕನಸಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಸುಮಾರು 200ಕೋಟಿ ರೂ. ವೆಚ್ಚದ ಯೋಜನೆ ಕಾರ್ಯಗತವಾಗುತ್ತಿದೆ ಎಂದು ನುಡಿದರು.
ಕೂಗಳತೆಯ ದೂರದಲ್ಲಿ ತಾಲೂಕು ಜಂಕ್ಷನ್:
ಉಳ್ಳಾಲ ತಾಲೂಕು ಘೋಷಣೆ ಆಗಿದೆ. ತಾಲೂಕು ಕೇಂದ್ರವಾಗಿ ಕ್ಷೇತ್ರದ ಜನತೆಗೆ ಸುಲಭದಲ್ಲಿ ತಲುಪುವಂತಾಗಲು ಅನುಕೂಲಕರ ಪ್ರದೇಶವನ್ನೇ ಆಯ್ಕೆ ಮಾಡಲಾಗುತ್ತದೆ. ಸಣ್ಣಪುಟ್ಟ ಕೆಲಸಕ್ಕೆ ನಗರಕ್ಕೆ ಪ್ರಯಾಣಿಸುವ ಅಗತ್ಯ ಇರುವುದಿಲ್ಲ. ತುಂಬೆ, ಪುದು ಹಾಗೂ ಮೇರೆಮಜಲು ಗ್ರಾಮದ ಕುರಿತಾದ ಸ್ವಲ್ಪ ಗೊಂದಲ ಇದೆ. ಮತ್ತೆ ನನ್ನ ಕ್ಷೇತ್ರದಲ್ಲಿ ಯಾರೇ ಆರಿಸಿಬಂದರೂ ಅಭಿವೃದ್ಧಿ ತಡೆಯಲು ಸಾಧ್ಯವಿಲ್ಲ. ತನ್ನಿಂತಾನೆ ಅಭಿವೃದ್ಧಿ ಕಾಣುವುದು ಶತಸಿದ್ಧ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸದಸ್ಯ ಎನ್. ಎಸ್. ಕರೀಂ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ, ಅಬ್ದುಲ್ ಲತೀಫ್ ಕಾಪಿಕಾಡ್, ಅಬ್ದುಲ್ ರಹಿಮಾನ್ ಚಂದುಹಿತ್ಲು, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ನಾಸಿರ್ ನಡುಪದವು, ಅಬ್ದುಲ್ ರಹಿಮಾನ್ ಮುದುಂಗಾರು, ಗದೀಸ್ ಕಲಾಯಿ ಬಾಳೆಪುಣಿ, ರಾಜಗೋಪಾಲ ಭಟ್, ಸೂರ್ಯ ಭಟ್ ಕೈರಂಗಳ, ಬಂಟ್ವಾಳ ಉಪ ವಿಭಾಗ ಸಹಾಯಕ ಆಭಿಯಂತರ ರವೀಂದ್ರ ಶೆಟ್ಟಿ, ಗುತ್ತಿಗೆದಾರ ಉದಯ ಶೆಟ್ಟಿ ಮುನಿಯಾಲು, ಸುದೀಪ್ ಶೆಟ್ಟಿ ಹಾಗೂ ಸತ್ತಾರ್ ಕೈರಂಗಳ ಉಪಸ್ಥಿತರಿದ್ದರು.