UN NETWORKS
ಹರೇಕಳ : ಉಳ್ಳಾಲ ವ್ಯಾಪ್ತಿಯ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಹಾಗೂ ತಲಪಾಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಇಂದಿರಾ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ತ್ಯಾಗಂ ಹರೇಕಳ : ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಹಾಗೂ ಸ್ಕೌಟ್ ಶಿಕ್ಷಕರಾಗಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕ್ರೀಡೆ ಮತ್ತು ಸ್ಕೌಟ್‍ನಲ್ಲಿ ಶಾಲೆ ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದು, ಜಿಲ್ಲೆಯಲ್ಲಿ ನಡೆಯುವ ಕ್ರೀಡಾ ಪಂದ್ಯಾಟದಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಪ್ರಚಾರ ಸಂಸ್ಥೆಯಿಂದ `ಕನ್ನಡ ಸಿರಿ’, ಜೆಸಿಐಯಿಂದ ಜೇಸೀ ಸಾಧನಾ ಶ್ರೀ ಪ್ರಶಸ್ತಿ, ಜೇಸೀ ಕಮಲಪತ್ರ, ಮೊಸರು ಕುಡಿಕೆ ಉತ್ಸವದಲ್ಲಿ ಉತ್ತಮ ಸಂಘಟಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.
ಇಂದಿರಾ
ಇಂದಿರಾ ಇವರು 1998ರಲ್ಲಿ ಬೆಳ್ತಂಗಡಿಯ ಪಡಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದ್ದು, 2001ರಲ್ಲಿ ಕೊಣಾಜೆ ಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಲಪಾಡಿ ನಾರ್ಲ ಶಾಲೆಯಲ್ಲಿ ಕಳೆದ 2011ರಲ್ಲಿ ಹೆಚ್ಚವರಿ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದ್ದು ಪ್ರಸ್ತುತ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯಲ್ಲಿ ಹಸಿರು ವನ ಯೋಜನೆ ರೂಪಿಸಿ ತೆಂಗು, ಹಲಸು, ಮಾವು, ನುಗ್ಗೇ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ. ಸೀಮಾರೂಪ ಗಿಡಗಳು ಈ ಶಾಲೆಯಲ್ಲಿರುವುದು ವಿಶೇಷ. ಇವರು ಇಲ್ಲಿ ಕರ್ತವ್ಯಕ್ಕೆ ಸೇರಿದಾಗ ಒಂದರಿಂದ ಐದನೇ ತರಗತಿಯಿದ್ದು, ಈ ಸಾಲಿನಿಂದ ಆರನೇ ತರಗತಿ ಆರಂಭಗೊಂಡಿದ್ದು ಇವರ ಪಾತ್ರ ಮಹತ್ವದ್ದಾಗಿದೆ.
