UN NETWORKS
ಬೋಳಿಯಾರ್ : ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಬೋಳಿಯಾರ್ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೋರ್ವರ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು ಬಡ ಕುಟುಂಬ ಕಂಗಾಲಾಗಿದೆ.
ಬೋಳಿಯಾರ್ ಗ್ರಾಮದ ಗುಂಡ್ಯ ನಿವಾಸಿ ಪರಿಶಿಷ್ಟ ಪಂಗಡದ ಕಮಲ ಬೈದ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಈ ಸಂದರ್ಭ ಮನೆಯಲ್ಲಿ ಕಮಲ ಅವರ ಪುತ್ರ ಕೃಷ್ಣ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದರು. ಇವರೆಲ್ಲರೂ ಮನೆ ಬೀಳುವ ಸದ್ದು ಕೇಳಿ ಹೊರಗೋಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಸಹಿತ ವಸ್ತ್ರವೂ ನಾಶವಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಆಚಾರ್ಯ, ಸದಸ್ಯರಾದ ಪ್ರಶಾಂತ್ ಗಟ್ಟಿ, ರೋಹಿನಾಥ್ ಶೆಟ್ಟಿ ಭೇಟಿ ನೀಡಿ ವಾಸಕ್ಕಾಗಿ ಪಕ್ಕದ ಮನೆಯಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಭೇಟಿ ನೀಡಿದರು.
ಅಘಾತಕ್ಕೊಳಗಾದ ಕುಟುಂಬ!
ಕಮಲ ಅವರ ಕುಟುಂಬ ತೀರಾ ಬಡತನದಿಂದ ಜೀವನ ಸಾಗಿಸುತ್ತಿದೆ. ಅವರ ಪುತ್ರ ಕೃಷ್ಣ ಅವರ ಕಿಡ್ನಿಗಳು ವೈಫಲ್ಯಕ್ಕೊಳಗಾಗಿದ್ದು, ಡಯಾಲಿಸಿಸ್ ಮಾಡಿಸಲು ಪರದಾಡುತ್ತಿದ್ದಾರೆ. ಮೊಮ್ಮಕ್ಕಳಿಬ್ಬರು ಶಾಲೆ ಹೋಗುತ್ತಿದ್ದು, ಇದೀಗ ಮನೆಯೂ ನಾಶವಾಗಿದೆ. ಮಕ್ಕಳ ಪುಸ್ತಕ ಸಹಿತ ಶಾಲೆಯ ಪರಿಕರಗಳೆಲ್ಲವೂ ನಾಶವಾಗಿದ್ದು ಕುಟುಂಬ ಅಘಾತಕ್ಕೊಳಗಾಗಿದೆ.