Site icon Ullalavani

ಸ್ಪರ್ಧಾತ್ಮಕ ಯುಗಕ್ಕೆ ಹೊಂದುವ ಶಿಕ್ಷಣ: ಜೂಲಿಯಾನ ಪಾಯಸ್

UN NETWORKS

ಪಾನೀರ್ : ಶಿಕ್ಷಕರು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತವಲ್ಲ, ಇದು ಆಧುನಿಕ, ಸ್ಪರ್ಧಾತ್ಮಕ ಯುಗವಾಗಿದ್ದು ಅವೆಲ್ಲಕ್ಕೂ ಹೊಂದಿಕೊಳ್ಳುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷನ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆಸಿಸ್ಸಿ ಸೆಂಟ್ರಲ್ ಶಾಲೆ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾಯಸ್ ಎಂದು ಅಭಿಪ್ರಾಯಪಟ್ಟರು.

ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ, ಕೆಥೋಲಿಕ್ ಸಭಾ ವತಿಯಿಂದ ಭಾನುವಾರ ಇಗರ್ಜಿಯಲ್ಲಿ ನಡೆದ ಶಿಕ್ಷಕರ ದಿನದ ಪ್ರಯುಕ್ತ ನಡೆದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಮಕ್ಕಳು ಮನೆಯಲ್ಲಿರುವ ಸಂದರ್ಭ ಮೊಬೈಲ್, ಕಂಪ್ಯೂಟರ್, ಟಿವಿ ಎದುರಲ್ಲೇ ಇರುತ್ತಾರೆ, ಇದರಿಂದಾಗಿ ಅವರಲ್ಲಿ ಇತರ ಚಟುವಟಿಕೆಗಳ ಬಗ್ಗೆ ಯಾವುದೇ ಉತ್ಸಾಹ ಇರುವುದಿಲ್ಲ. ಈ ನಿಟ್ಟಿನಲ್ಲಿ ಪೋಷಕರೂ ಮಕ್ಕಳ ಬಗ್ಗೆ ಕಾಳಜಿ ಹೊಂದಿರಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಮಾತನಾಡಿ, ಇಂದಿನ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿರುವುದರಿಂದ ಹೆಚ್ಚಿನ ಚಟುವಟಿಕೆಗಳು ಇದ್ದು ಒತ್ತಡದ ಜೀವನ ನಡೆಸುತ್ತಿದ್ದಾರೆ, ಇಂತಹ ಸನ್ನಿವೇಶದಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ ಒತ್ತಡ ನಿವಾರಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ರುವಿತಾ ಮೆನೇಜಸ್, ಕೋಟೆಕಾರ್ ಕಾರ್ಮೆಲ್ ಶಾಲೆಯ ಮುಖ್ಯ ಶಿಕ್ಷಕಿ ಜೆನಿಫರ್ ಮೋರಸ್, ಕೆಥೋಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಹಾಗೂ ರೇಶ್ಮಾ ಸಂತಾನೇಜ್ ಕಾರ್ಯಕ್ರಮ ನಿರೂಪಿಸಿದರು.

Exit mobile version