UN NETWORKS
ಉಳ್ಳಾಲ: ಶಂಕಿತ ಡೆಂಗ್ಯುಗೆ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೋಮೇಶ್ವರದ ಕುಂಪಲ ಹಾಗೂ ಉಳ್ಳಾಲದ ಚೆಂಬುಗುಡ್ಡೆ ನಿವಾಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಉದಯಚಂದ್ರ ಎಂಬವರ ಪತ್ನಿ ಸುಮತಿ(35) ಹಾಗೂ ಕುಂಪಲ ಕುಂಪಲ ಬಲ್ಯ ನಿವಾಸಿ ಪ್ರಕಾಶ್ ಗಟ್ಟಿ (47) ಸಾವನ್ನಪ್ಪಿದವರು.ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಸುಮತಿ ಅವರು ಶನಿವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಜಾಂಡೀಸ್ ಇರುವ ಕುರಿತು ತಿಳಿದುಬಂದಿತ್ತು. ಬಳಿಕ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಏರುಪೇರಾಗಿದ್ದು, ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಪ್ಲೇಟ್ ಲೆಟ್ ನಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬಂದಿರುವುದರಿಂದ ಡೆಂಗ್ಯುಗೆ ಬಲಿಯಾಗಿರುವ ಸಾಧ್ಯತೆಗಳಿವೆ. ಸುಮತಿ ಅವರ ಪತಿ ರಿಕ್ಷಾ ಚಾಲಕರಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮತಿ ಯೆನೆಪೋಯ ಆಸ್ಪತ್ರೆಯಲ್ಲಿ ಸ್ವೀಪಿಂಗ್ ಕೆಲಸ ನಿರ್ವಹಿಸುತ್ತಿದ್ದರು.
ಪ್ರಕಾಶ್ ಗಟ್ಟಿ ಅವರು ಟೆಂಪೋ ಚಾಲಕನಾಗಿ ದುಡಿಯುತ್ತಿದ್ದರು. ಜ್ವರ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೂರು ಬಾಟಲಿ ರಕ್ತವನ್ನು ನೀಡಲಾಯಿತಾದರೂ, ಪ್ಲೇಟ್ ಲೆಟ್ ನಲ್ಲಿ ವ್ಯತ್ಯಾಸ ಕಂಡುಬಾರದೇ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಇವರು ಕುಟುಂಬದ ಆಧಾರಸ್ತಂಭವಾಗಿದ್ದರು. ಇಬ್ಬರ ಬಲಿಯಿಂದ ಉಳ್ಳಾಲ ಭಾಗದಲ್ಲಿಯೂ ಡೆಂಗ್ಯು ಆತಂಕ ಹೆಚ್ಚಾಗಿದೆ.