Site icon Ullalavani

`ಯೆನೆಪೋಯ ವೈದ್ಯಕೀಯ ಆಸ್ಪತ್ರೆಯಲ್ಲಿ ನಾಲ್ವರ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ

UN NETWORKS

ಉಳ್ಳಾಲ : ಡಯಾಲಿಸಿಸ್ ಪ್ರಕ್ರಿಯೆಗೆ ಲಕ್ಷಾಂತರ ರೂ. ವೆಚ್ಚ ಆಗುವುದಲ್ಲದೆ ರೋಗಿಗಳ ಪಾಲಿಗೆ ಪ್ರಕ್ರಿಯೆ ಹೊರೆಯಾಗುತ್ತಿದೆ. ಇದನ್ನು ಮನಗಂಡು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಯಲ್ಲಿ ಮೂತ್ರಪಿಂಡ ಕಸಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಡಿಮೆ ವೆಚ್ಚದಲ್ಲಿ ಈಗಾಗಲೇ ಗ್ರಾಮೀಣ ಭಾಗದ ನಾಲ್ವರ ಮೂತ್ರಪಿಂಡ ಕಸಿ ನಡೆಸಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ ಭಟ್ ಹೇಳಿದರು.

ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಸೋಮವಾರ ಯಶಸ್ವಿ ಮೂತ್ರಪಿಂಡ ಕಸಿ ನಡೆಸಿದ ನಾಲ್ವರು ರೋಗಿಗಳಾದ ಇರ್ಫಾನ್.ಯಸ್ ಶಿರಸಿ, ಸೌಮ್ಯಲತಾ ಬೆಳ್ತಂಗಡಿ, ನೌಸೀರ್ ಪಾಷಾ, ಬವರ್ ಲಾಲ್ ಜೈನ್ ಜತೆಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಯೆನೆಪೋಯದಲ್ಲಿ ಕಸಿ ಸೇವೆ ಅತ್ಯಾಧುನಿಕವಾಗಿ ಹಾಗೂ ಕೈಗೆಟಕುವ ದರದಲ್ಲಿ ಮಾಡಲಾಗುತ್ತಿದೆ. ಸಕ್ಕರೆಕಾಯಿಲೆ, ರಕ್ತದೊತ್ತಡ ದಂತಹ ಕಾಯಿಲೆಗಳಿಂದ ಬಳಲುವ ಅನೇಕ ಮಂದಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಡಯಾಲಿಸಿಸ್ ಪ್ರಕ್ರಿಯೆಯಿಂದ ಆರ್ಥಿಕ ಹೊರೆಯಾಗುವುದರ ಜತೆಗೆ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತಿಲ್ಲ. ಇದನ್ನು ಮನಗಂಡು ಯೆನೆಪೋಯ ಸಂಸ್ಥೆಯ ಅಧ್ಯಕ್ಷರ ನಿರ್ದೇಶನುಸಾರ ಮೂತ್ರಪಿಂಡ ಕಸಿ ಪ್ರಕ್ರಿಯೆ ನಡೆಸುವ ತಂಡವನ್ನು ರಚಿಸಲಾಗಿದೆ. ಈವರೆಗೆ ಸಂಬಂಧಿಕರು ಹಾಗೂ ಮೆದುಳು ನಿಷ್ಕ್ರಿಯ ಆದಂತಹ ರೋಗಿಗಳು ದಾನವಾಗಿ ನೀಡಿದ ಮೂತ್ರಪಿಂಡವನ್ನು ಕಸಿ ಮಾಡುವ ಮೂಲಕ ನಾಲ್ವರು ರೋಗಿಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂವರು ಆರೋಗ್ಯಯುತವಾಗಿದ್ದಾರೆ. ಈ ನಿಟ್ಟಿನಲ್ಲಿ ದಾನಿಗಳು ಮುಂದೆ ಬರಬೇಕಿದ್ದು, ರೋಗಿಗಳ ಬಾಳು ಬೆಳಗಿಸಬೇಕಿದೆ ಎಂದರು.

ಡಾ.ಮುಜೀಬು ರಹಿಮಾನ್ ಮಾತನಾಡಿ ` ಮೂತ್ರಪಿಂಡ ಕಸಿ ರೋಬೋಟಿಕ್ ಯಂತ್ರದ ಮೂಲಕ ನಡೆಸಲಾಗುತ್ತಿದೆ. ಈ ಮೂಲಕ ರೋಗಿಗೆ ಯಾವುದೇ ರೀತಿಯ ನೋವುಗಳಿಲ್ಲದೆ ಚಿಕಿತ್ಸೆ ನೀಡಬಹುದು ಎಂದರು.

ಡಾ.ಸಂತೋಷ್ ಪೈ ಮಾತನಾಡಿ ದಾನಿಗಳು ಮುಂದೆ ಬಂದಲ್ಲಿ ಮೆದುಳು ನಿಷ್ಕ್ರಿಯೆಗೊಂಡ ಒಬ್ಬರ ರೋಗಿ ಅಂಗಾಂಗದಿಂದ ಎಂಟು ಮಂದಿಯ ಜೀವ ಉಳಿಸಬಹುದು. 15 ವರ್ಷಗಳ ಹಿಂದೆ ರಕ್ತದಾನಕ್ಕೆ ಹೆದರುವ ಸ್ಥಿತಿಯಿತ್ತು. ಸದ್ಯ ಎಲ್ಲಾ ಧರ್ಮದವರು ಅದನ್ನು ಅಗತ್ಯವಾಗಿ ನಡೆಸುತ್ತಿದ್ದಾರೆ. ಮುಂದೆ ಅಂಗಾಂಗ ದಾನ ಮಾಡುವುದರ ಅರಿವು ಜನರಲ್ಲಿ ಮೂಡಬೇಕಿದೆ. ಮೂತ್ರಪಿಂಡ ದಾನದ ಹಿಂದೆ ವ್ಯವಹಾರದ ಜಾಲವಿತ್ತು. ಆದರೆ ಸದ್ಯ ಮೂತ್ರಪಿಂಡ ದಾನಿಗಳ ಪರಿಶೀಲಿಸಲು ಸರಕಾರದ ಸಮಿತಿಯೇ ಅಸ್ತಿತ್ವದಲ್ಲಿದೆ. ಸರಕಾರ ನಿಯುಕ್ತಿಗೊಳಿಸಿದ ವೈದ್ಯರ ಅನುಮತಿ ಪಡೆದ ಬಳಿಕವಷ್ಟೇ ದಾನ ಮಾಡಬಹುದು. ಮನುಷ್ಯ ಸತ್ತ ಬಳಿಕ ಅಂಗಾಂಗಳನ್ನು ದಾನ ಮಾಡಬಾರದೆಂದು ಯಾವುದೇ ಧರ್ಮದಲ್ಲಿ ಉಲ್ಲೇಖಿಸಿಲ್ಲ. ಎಲ್ಲಾ ಧರ್ಮದ ಮುಖಂಡರು ತಮ್ಮ ಸಮುದಾಯದ ಜನರಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.

ಈ ಸಂದರ್ಭ ಡಾ.ನಿಶ್ಚಿತ್ ಡಿಸೋಜ, ಡಾ.ಗಣೇಶ್ ಕಾಮತ್, ಡಾ.ರೋನಿ ಜಾರ್ಜ್, ಡಾ. ಪದ್ಮನಾಭ್ ಭಟ್, ಡಾ.ಶಿಮ್ಮರ್, ಡಾ.ತಿಪ್ಪೇಸ್ವಾಮಿ ಹಾಗೂ ಸಂಯೋಜಕ ನೆಲ್ವಿನ್ ನೆಲ್ಸನ್ ಉಪಸ್ಥಿತರಿದ್ದರು.

ಡಯಾಲಿಸಿಸ್ ಚಿಕಿತ್ಸೆ ನಡೆಯುತ್ತಿರುವ ಸಂದರ್ಭ ಮಾನಸಿಕವಾಗಿ ಕುಗ್ಗುವುದರ ಜತೆಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದೆ. ವಿಪರೀತ ನೋವು ತಾಳಲಾಗುತ್ತಿರಲಿಲ್ಲ. ತಂದೆ ದಾನ ರೂಪದಲ್ಲಿ ನೀಡಿದ ಮೂತ್ರಪಿಂಡದಿಂದಾಗಿ, ಕಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಈಗ ದೈಹಿಕವಾಗಿ ಸದೃಢನಾಗಿದ್ದೇನೆ. ಚಾಲನಾ ವೃತ್ತಿಯಲ್ಲಿ ಮುಂದುವರಿದಿದ್ದೇನೆ.
ಇರ್ಫಾನ್ ಎಸ್ . ಶಿರಸಿ
ಕಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವರು

ಒಂದು ವರ್ಷದಿಂದ ಮೂತ್ರಪಿಂಡ ಡಯಾಲಿಸಿಸ್‍ಗೆ ಬರುತ್ತಿದ್ದೆನು. ಆರ್ಥಿಕವಾಗಿ ಕುಗ್ಗಿದಾಗ, ಸಂಬಂಧಿಕರೊಬ್ಬರು ಮೂತ್ರಪಿಂಡ ದಾನ ಮಾಡಿದ್ದರಿಂದ ಹಳೇಯ ಬದುಕು ಕಂಡುಕೊಂಡಿದ್ದೇನೆ. ರೋಬೋಟಿಕ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆಗೆ ಮುನ್ನ ಭಯವಿದ್ದರೂ ಶಸ್ತ್ರಚಿಕಿತ್ಸೆ ನೋವಿಲ್ಲದೆ ನಡೆದಿದೆ.
ನೌಸೀರ್ ಪಾಷಾ

ನನ್ನ ತಂದೆಗೆ ಕಿಡ್ನಿ ದಾನ ಮಾಡಿ ಸಿಕ್ಕಿದ್ದರಿಂದಾಗಿ ಐದು ವರ್ಷದಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಪಟ್ಟವರು ಸದ್ಯ ಆರೋಗ್ಯಯುತವಾಗಿದ್ದಾರೆ. ಸಮಾಜದಲ್ಲಿ ಜನ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ದಾನಿಗಳು ಕ್ಲಪ್ತ ಸಮಯದಲ್ಲಿ ಒದಗಿಸಿಕೊಟ್ಟರೆ ಬಾಳು ಬೆಳಕಾಗುವುದು.
ಪ್ರವೀಣ್ (ಪುತ್ರ)
ಬವರ್ ಲಾಲ್ ಜೈನ್
ಕಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವರು

Exit mobile version