Site icon Ullalavani

ಬಾವಿಗೆ ಬಿದ್ದು ಹುಲಿವೇಷಧಾರಿ ಸಾವು

ಉಳ್ಳಾಲ : ಬಾವಿಗೆ ಬಿದ್ದು ಹುಲಿವೇಷಧಾರಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ವಿದ್ಯಾನಗರ ಎಂಬಲ್ಲಿ ಶುಕ್ರವಾರ ತಡರಾತ್ರಿ ವೇಳೆ ಸಂಭವಿಸಿದೆ.

ಮಂಗಳೂರು ಗರೋಡಿ ನಿವಾಸಿ ವಸಂತ ಕುಮಾರ್ (57) ಸಾವನ್ನಪ್ಪಿದವರು. ಕುಂಪಲ ವಿದ್ಯಾನಗರದ ಅನಿಲ್ ಎಂಬವರ ಮನೆಯಲ್ಲಿ ಶವ ಪತ್ತೆಯಾಗಿದೆ. ಶರತ್ ಎಂಬವರ ಮಾಲೀಕತ್ವದ ಹುಲಿವೇಷಧಾರಿಗಳ ತಂಡದಲ್ಲಿ ಬಣ್ಣ ಹಚ್ಚಿದ್ದ ವಸಂತ್ ಅವರು, ಕುಂಪಲ ಮೊಸರುಕುಡಿಕೆ ಉತ್ಸವದ ಟ್ಯಾಬ್ಲೋ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಬಳಿಕ ತಡರಾತ್ರಿಯಿಂದ ನಾಪತ್ತೆಯಾಗಿದ್ದರು. ತಡರಾತ್ರಿ ಬಾವಿಯ ದಂಡೆಯಲ್ಲಿ ಕುಳಿತ ಸಂದರ್ಭ ಆಯತಪ್ಪಿ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ. ಬಾವಿಯ ಮೇಲೆ ಶೀಟು ಹಾಯಿಸಿದ್ದ ಪರಿಣಾಮ ಬಾವಿಯೊಳಕ್ಕೆ ವಸಂತ್ ಅವರು ಬಿದ್ದಿರುವುದು ಗೋಚರಿಸಿರಲಿಲ್ಲ. ತಡರಾತ್ರಿಯಿಡೀ ತಂಡದವರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಸಂಜೆ ವೇಳೆ ಶಾಮಿಯಾನದವರು ಶೀಟು ತೆಗೆಯಲು ಮುಂದಾದ ಸಂದರ್ಭ ವೇಷಧಾರಿಗಳು ಹಾಕುವ ಹುಲಿಯ ತಲೆ ಗೋಚರಿಸಿತ್ತು. ಸಂಶಯಗೊಂಡು ಅಗ್ನಿಶಾಮಕ ದಳದವರಿಗೆ ಕರೆಸಿ, ಬಾವಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ. ಪಣಂಬೂರು ಹಾರ್ಬರ್ ನಲ್ಲಿ ಇಲೇಕ್ಟ್ರೀಷಿಯನ್ ವೃತ್ತಿಯನ್ನು ನಡೆಸುತ್ತಿದ್ದ ಮೃತರು ವಿವಾಹಿತರಾಗಿದ್ದಾರೆ. ಹವ್ಯಾಸಿ ಹುಲಿವೇಷವನ್ನು ಧರಿಸುತ್ತಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ

Exit mobile version