Site icon Ullalavani

ಮನೆ ಕಂಪೌಂಡ್,ರಸ್ತೆಗೆ ಉರುಳಿದ ಬೃಹತ್ ಬಂಡೆಕಲ್ಲು,250 ಮನೆಗಳಿಗೆ ಸಂಪರ್ಕ ಕಡಿತ

UN NETWORKS

ಮುನ್ನೂರು : ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜಲುತೋಟ ಭಾಗದಲ್ಲಿ ಬೃಹತ್ ಬಂಡೆಕಲ್ಲು ಹಾಗೂ ಗುಡ್ಡೆ ಜರಿತ ಉಂಟಾಗಿ ಮನೆ ಕಂಪೌಂಡ್ ಗೆ ಹಾನಿಯಾಗಿ, 250 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೋಮನಾಥ ಉಳಿಯ ದಿಂದ ರಾಣಿಪುರ ಉಳಿಯ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾಗಿದೆ.

ನಾರಾಯಣ ಎಂಬವರ ಮನೆಯ ಕಂಪೌಂಡ್ ಮತ್ತು ರಸ್ತೆಗೆ ಗುರುವಾರ ತಡರಾತ್ರಿ 2.30 ಹೊತ್ತಿಗೆ ಬಂಡೆಕಲ್ಲು ಉರುಳಿದೆ. ರಸ್ತೆಯ ಮೇಲೆಯೇ ಬೃಹತ್ ಗಾತ್ರದ ಕಲ್ಲು ಉರುಳಿದ ಪರಿಣಾಮ ತೆರವುಗೊಳಿಸಲು ಹಲವು ದಿನಗಳು ಬೇಕಾಗಿವೆ. ಅಷ್ಟರವರೆಗೆ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಲಿದೆ. 20 ವರ್ಷಗಳ ಹಿಂದೆ ರಸ್ತೆ ನಿರ್ಮಾಣದ ಸಂದರ್ಭ ಬಂಡೆಕಲ್ಲಿನ ಗಾತ್ರದಿಂದಾಗಿ ತೆರವುಗೊಳಿಸಲು ಅಸಾಧ್ಯವಾಗಿತ್ತು. ಹಾಗೆಯೇ ಬಿಟ್ಟು ರಸ್ತೆ ನಿರ್ಮಿಸಿದ್ದರಿಂದಾಗಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಭಾಗದಲ್ಲಿ ಜನರು ಬಂಡೆಕಲ್ಲಿನಡಿಯಿಂದ ತೆರಳುವಾಗ ಆತಂಕಪಡುತ್ತಿದ್ದರು. ಅದೃಷ್ಟವಶಾತ್ ಬಂಡೆಕಲ್ಲು ರಾತ್ರಿ ಹೊತ್ತಿನಲ್ಲಿ ಉರುಳಿರುವುದರಿಂದ ರಸ್ತೆಯಲ್ಲಿ ಸಂಚಾರವಿಲ್ಲದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಸಮೀಪದಲ್ಲೇ ಮನೆಯೂ ಇದ್ದು, ಕಂಪೌಂಡಿಗೆ ಮಾತ್ರ ಬಿದ್ದಿರುವುದು ಪವಾಡಸದೃಶವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೂರು ದಿನಗಳು ಬೇಕಾದೀತು
ತೆರವು ಕಾರ್ಯಾಚಾರಣೆಗೆ ಮೂರು ದಿನಗಳು ತಗಲಬಹುದು. ಬಂಡೆಕಲ್ಲು ಗಾತ್ರ ದೊಡ್ಡದಾಗಿರುವುದರಿಂದ ಕಂಪ್ರೆಸ್ಸರ್ ಮೂಲಕ ಅದನ್ನು ಒಡೆದು ತೆರವುಗೊಳಿಸಬೇಕಾಗುತ್ತದೆ. ಹಾಗೂ ಮಣ್ಣಿನ ಪ್ರಮಾಣವೂ ಅಧಿಕವಾಗಿರುವುದರಿಂದ ತೆರವು ಕಾರ್ಯಾಚರಣೆಗೆ ಮೂರು ದಿನಗಳು ಬೇಕಾಗಬಹುದು ಹಿಂದಿನಿಂದಲೂ ಅಪಾಯದ ಕುರಿತು ಗ್ರಾಮಸ್ಥರಿಂದ ದೂರುಗಳಿತ್ತು. ಆದರೆ ಜನವಸತಿ ಪ್ರದೇಶವಾಗಿರುವುದರಿಂದ ಬಂಡೆಕಲ್ಲು ಒಡೆಯಲು ಯಾವುದೇ ಅವಕಾಶವಿರಲಿಲ್ಲ ಎಂದು ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಭಂಡಾರ ಬೈಲು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿಸೋಜ, ಸದಸ್ಯ ನವೀನ್ ಡಿಸೋಜ, ಗ್ರಾಮಕರಣಿಕ ನಯನಾ, ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್, ಪಂಚಾಯತ್ ರಾಜ್ ಇಂಜಿನಿಯರ್ ನಿತಿನ್ ಕುಮಾರ್ ಭೇಟಿ ನೀಡಿದ್ದಾರೆ.

Exit mobile version