Site icon Ullalavani

ಅಸೈಗೋಳಿ: ಮೊಸರುಕುಡಿಕೆ ಉತ್ಸವ ಪ್ರಯುಕ್ತ ಕ್ರೀಡಾಕೂಟ

UN NETWORKS

ಅಸೈಗೋಳಿ : ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತೆ ಕಾಪಾಡಲು ಕ್ರೀಡೆ ಸಹಕಾರಿ. ಸೋಲು ಗೆಲುವಿನ ಮೂಲವಾಗಿದ್ದು, ಸೋಲಿಗೆ ಧೃತಿಗೆಡಬಾರದು. ಹತ್ತು ವರ್ಷಗಳ ಹಿಂದೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇತ್ತು, ಆದರೆ ಇಂದು ಮೊಬೈಲ್ ಹಾವಳಿಯಿಂದಾಗಿ ಯುವಸಮುದಾಯ ಕ್ರೀಡೆಯಿಂದ ದೂರವಾಗುತ್ತಿರುವುದು ಖೇದಕರ ಎಂದು ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಅಭಿಪ್ರಾಯಪಟ್ಟರು.

ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಭಾನುವಾರ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಡೆದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿ, ಕಳೆದ 31 ವರ್ಷಗಳಿಂದ ಮೊಸರುಕುಡಿಕೆ ಪ್ರಯುಕ್ತ ಕ್ರೀಡೋತ್ಸವ ನಡೆಸಲಾಗುತ್ತಿದ್ದು, ಜಾತಿ, ಧರ್ಮಾತೀತವಾಗಿ ಜನ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ದೈಹಿಕ, ಮಾನಸಿಕವಾಗಿಯೂ ಕಲಿಕೆಗೂ ಕ್ರೀಡೆ ಪೂರಕ ಎಂದು ಹೇಳಿದರು. ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ಆಳ್ವ ತೇವುನಾಡುಗುತ್ತು, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಹಿಳಾ ಸಂಚಾಲಕಿ ದೇವಕಿ ಅಸೈಗೋಳಿ, ಕೋಶಾಧಿಕಾರಿ ಸುಧಾಕರ್ ಭಟ್ ಮುಖ್ಯ ಅತಿಥಿಗಳಾಗಿದ್ದರು.

ಪ್ರಧಾನ ಕಾರ್ಯದರ್ಶಿ ತ್ಯಾಗಂ ಸ್ವಾಗತಿಸಿದರು. ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಸಂಚಾಲಕ ರಾಧಾಕೃಷ್ಣ ರೈ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version