UN NETWORKS
ಕೊಣಾಜೆ : ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಯಾವತ್ತಿಗೂ ಮರೆಯದೆ ಅವರ ದೇಶಪ್ರೇಮ, ತ್ಯಾಗಮಯ ಹೋರಾಟದ ಬದುಕನ್ನು ಇಂದಿನ ಯುವ ಸಮುದಾಯ ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದು ಕರ್ನಲ್ ಎ.ಜೆ.ಭಂಡಾರಿ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವಕರು ರಾಷ್ಟ್ರಭಕ್ತಿಯೊಂದಿಗೆ ಸೇನೆ ಸೇರಲು ಮುಂದಾಗಬೇಕು. ಕರ್ನಾಟಕದಲ್ಲಿ ಅದರಲ್ಲೂ ಮಂಗಳೂರಿನಿಂದ ಸೇನೆ ಸೇರುವವರು ಬಹಳ ವಿರಳ. ನಮ್ಮಲ್ಲಿ ಸೇನೆಯ ಬಗ್ಗೆ ಇರುವ ಕೀಳರಿಮೆಯನ್ನು ದೂರಗೊಳಿಸುವುದರೊಂದಿಗೆ ರಾಷ್ಟ್ರ ರಕ್ಷಣೆಯ ಪುಣ್ಯ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಅಲ್ಲದೆ ಇತ್ತೀಚೆಗೆ ಕೆಲವು ಯುವ ಸಮುದಾಯ ಡ್ರಗ್ಸ್ ಮಾಫಿಯಾಗಳಿಗೆ ಬಲಿಯಾಗುತ್ತಿದ್ದು ಜಾಗೃತಗೊಳ್ಳಬೇಕಿದೆ ಎಂದರು. ದ್ವಜಾರೋಹಣ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಭಾರತವು ಒಂದು ಕಂಬದ ಡೇರೆಯಲ್ಲ, ಅದು ಸಾವಿರ ಕಂಬದ ಚಪ್ಪರವಾಗಿದೆ. 73ನೇ ಸ್ವಾತಂತ್ರ್ಯವನ್ನು ನಾವು ಆಚರಿಸುವ ಸಂದರ್ಭದಲ್ಲಿ ನಾವು ಇದಕ್ಕಾಗಿ ಹೋರಾಡಿದ ಮಹಾತ್ಮರನ್ನು ನಾವು ಸ್ಮರಿಸಿಕೊಳ್ಳಬೇಕು. ಅಲ್ಲದೆ ರಾಷ್ಟ್ರಸೇವೆಯೆಂಬ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ ಉಪಸ್ಥಿತರಿದ್ದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿ, ಪರಿಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ ವಂದಿಸಿದರು.