UN NETWORKS
ಕುತ್ತಾರು : ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದುಗಳ ಎದುರು ಇನ್ನು ತಮಗೆ ಉಳಿಗಾಲವಿಲ್ಲ ಎಂದು ಅರಿತುಕೊಂಡ ಬ್ರಿಟಿಷರು ಭಾರತೀಯರನ್ನು ಸ್ವತಂತ್ರಗೊಳಿಸಿದರೂ ಭಾರತೀಯರು ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಬಾರದೆಂದು ಹಿಂದು ಮುಸ್ಲಿಂರನ್ನು ಬಹಳ ಯೋಜನಾಬದ್ಧವಾಗಿ ಒಡೆದು ಹಾಕಲು ಹಿಂದು ಮುಸ್ಲಿಂ ನಡುವೆ ಇದ್ದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು ಹೋದರು, ಅದನ್ನು ಕೆಲವರು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದಲೇ ಭಾರತದಲ್ಲಿ ಶಾಂತಿ ಕದಡುತ್ತಿದೆ ಎಂದು ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಿಂದು ಜಾಗರಣ ವೇದಿಕೆ ಉಳ್ಳಾಲ ಪ್ರಖಂಡ ಆಶ್ರಯದಲ್ಲಿ ಭಾನುವಾರ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದುಗಳು ಈ ದೇಶದ ಗುಲಾಮಿ ಸಂತತಿ, ಅವರು ಆಳಿಸಿಕೊಂಡವರು, ಮುಸ್ಲಿಂ ಸಮುದಾಯ ಅವರನ್ನು ಆಳಿದ ಸಂತಾನ, ಯಾವುದೇ ಕಾರಣಕ್ಕೂ ಹಿಂದುಗಳಿಗೆ ಆಡಳಿತ ಕೊಡಬೇಡಿ. ಅವರ ಜೊತೆ ಯಾವುದೇ ಬಗೆಯ ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಬ್ರಿಟಿಷರು ಬ್ರಿಟಿಷರು ಮುಸ್ಲಿಂರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿದರು. ಭಾರತದಿಂದ ಹೊರಟಾಗ ಸಾಮರಸ್ಯ ಕೊನೆಗಾಣಿಸಲು ಹಚ್ಚಿದ ಬೆಂಕಿಯನ್ನು ನಂದಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದು ನುಡಿದರು.
ಗಾಂಧೀಜಿಯಿಂದಾಗಲೀ, ಕಾಂಗ್ರೆಸ್‍ನಿಂದಾಗಲೀ ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಅದೆಷ್ಟೋ ಹೋರಾಟಗಾರರ ತ್ಯಾಗ ಬಲಿದಾನವಾಗಿದೆ. 1100ವರ್ಷಗಳ ರಾಜರುಗಳ ಆಕ್ರಮಣಕ್ಕಿಂತ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಬಂದ ಬ್ರಿಟೀಷರು ಭೀಕರ ಆಕ್ರಮಣ ಮಾಡಿದರು. ಹಿಂದೂ, ಮುಸ್ಲಿಂ ಒಗ್ಗಟ್ಟಿಗೆ ಹೆದರಿ ಮುಸ್ಲಿಮರನ್ನು ಎತ್ತಿ ಕಟ್ಟಿದ ಪರಿಣಾಮ ಮುಸ್ಲಿಂ ಲೀಗ್ ಸ್ಥಾಪನೆಯಾಯಿತು. ದೇಶದ ಸಂಸ್ಕೃತಿಯಾಗಿ ಮತ್ತೆ ಹಿಂದೂ ಮುಸ್ಲಿಂ ಒಂದಾಗಿ 1905-11 ವರೆಗೆ ಒಂದೇ ಮಾತರಂ ಘೋಷಣೆ ಮೊಳಗಿತು. ಆದರೆ ಕಾಂಗ್ರೆಸ್ ಮುಸಲ್ಮಾನರ ತುಷ್ಠೀಕರಣದಲ್ಲಿ ಮುನ್ನಡೆಯಿತು. 1914ರವರೆಗೆ ಮಹಮ್ಮದಾಲಿ ಜಿನ್ನಾ ಪ್ರಬಲ ರಾಷ್ಟ್ರೀಯ ವಾದಿಯಾಗಿದ್ದರು. ತದನಂತರ ಮತೀಯವಾಗಿ ಬೆಳದರು ಎಂದು ಹೇಳಿದರು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ 65ವರ್ಷದ್ದು, ಅಹಿಂಸೆಯಿಂದಲ್ಲ, ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿ ಸಿಕ್ಕಿದೆ. ಆದರೂ ಅಹಿಂಸೆ ಎಂದು ಜನರನ್ನು ಮೂರ್ಖರನ್ನಾಗಿಸಲಾಯಿತು. ಹಲವಾರು ರಾಜರುಗಳ ದಾಳಿ ಬಳಿಕ ಬ್ರಿಟಿಷರದ್ದು ಕೊನೆಯ ದಾಳಿಯಾಗಿತ್ತು. ಅದೆಷ್ಟೋ ಮಂದಿ ಮಾನ, ಪ್ರಾಣ ಕಳೆದುಕೊಂಡಿದ್ದಾರೆ. ಆಗಸ್ಟ್ 14ರ ಮಧ್ಯರಾತ್ರಿ ಲಕ್ಷಾಂತರ ಜನ ಪ್ರಾಣ, ಮಾನ ಕಳೆದುಕೊಂಡ ದಿನ, ಕಣ್ಣೀರ ದಿನ. ಸಂತಸದ ದಿನವಲ್ಲ. ನಮ್ಮ ಪವಿತ್ರ ನದಿಗಳು ಇಂದು ಪಾಕಿಸ್ತಾನಕ್ಕೆ ಸೇರಿಕೊಂಡಿದೆ ಎಂದರು. ಭಾರತ ಸ್ವತಂತ್ರಗೊಂಡಿದ್ದು ಅಹಿಂಸೆಯಿಂದಲ್ಲ. ಸ್ವತಂತ್ರ ಹೋರಾಟಗಾರರನ್ನು ಕೊಂದು ಹಾಕಿರುವುದು ಅಹಿಂಸೆಯ ಲಕ್ಷಣವಲ್ಲ. ಪ್ರಸ್ತುತ ಅಖಂಡ ಭಾರತದ ಮೊದಲ ಹೆಜ್ಜೆ 370ನೇ ಕಾಯ್ದೆ ರದ್ದಾಗಿದೆ. ಇತಿಹಾಸದಲ್ಲಿ ಕಂಡು ಕೇಳರಿಯದ ನರಮೇಧ ನಡೆದಿದ್ದರೂ ಗುಲಾಮಿ ಇತಿಹಾಸವನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ನಡೆದಿದೆ. ಹಾಗಾಗಿ ಭಾರತದ ಎರಡು ಸಾವಿರ ವರ್ಷಗಳ ಇತಿಹಾಸವನ್ನು ದೇಶದ ಪ್ರತಿಯೊಬ್ಬ ಮಗುವೂ ಕಲಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ `ಭಾರತದ ಸ್ವಾತಂತ್ರ್ಯದ ಗುರಿ ಇಟ್ಟುಕೊಂಡು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಾಯಿತೋ ಅವರ ಗುರಿ ಈಡೇರಿಸಲು ಕಟಿಬದ್ಧನಾಗಿದ್ದೇನೆ. ಅದಕ್ಕಾಗಿ ನಾನು ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ಧ. ಅಖಂಡ ಭಾರತ ನಿರ್ಮಾಣವೇ ನಮ್ಮ ಗುರಿ ಎಂಬ ಪ್ರತೀಜ್ಞಾ ವಿಧಿಗೈಯಲಾಯಿತು.
ನಿವೃತ್ತ ಸೇನಾನಿ ಸುಧಾಕರ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಮುಖಂಡರುಗಳಾದ ಕೆ.ಟಿ. ಸುವರ್ಣ, ಹರೀಶ್ ಕುತ್ತಾರು, ಪ್ರಖಂಡ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಂಪಲ, ಚರಣ್ ಕುತ್ತಾರು, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ವಿಭಾಗ ಅಧ್ಯಕ್ಷ ಕಿಶೋರ್ ಕುಂಪಲ ಉಪಸ್ಥಿತರಿದ್ದರು. ಇದಕ್ಕೂ ಮುಂಚಿತವಾಗಿ ತಲಪಾಡಿ, ತೊಕ್ಕೊಟ್ಟು, ಕೊಣಾಜೆ, ಕೋಟೆಕಾರು ಮೊದಲಾದ ಕಡೆಗಳಿಂದ ಬೈಕ್ ರ್ಯಾಲಿ ನಡೆಯಿತು.
ಚೇತನ್ ಕುಂಪಲ ಸ್ವಾಗತಿಸಿದರು. ಶೇಖರ್ ಕನೀರುತೋಟ ಕಾರ್ಯಕ್ರಮ ನಿರೂಪಿಸಿದರು.