Site icon Ullalavani

ಮುನ್ನೂರು: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

UN NETWORKS

ಮುನ್ನೂರು : ಹಣ ಕೊಟ್ಟು ಉಪಯೋಗಿಸುವಂತಹ ಬಿಸ್ಲೆರಿಗಿಂತಲೂ ಪರಿಶುದ್ಧ ನೀರು ಕೇಬಲ ಎರಡು ರೂಪಾಯಿಗೆ ಸಿಗುತ್ತಿದೆ, ಉದರ ಸದುಪಯೋಗವಾದಾಗ ಸರ್ಕಾರದ ಯೋಜನೆ ಸಾರ್ಥಕವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್ ಮಾತನಾಡಿ ಹಲವು ಸಮಯಗಳಿಂದ ಕೆಲಸ ಆಗದೆ ಬಾಕಿಯಾಗಿತ್ತು, ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದಯ ತಿಳಿಸಿದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಗಟ್ಟಿ ಭಂಡಾರಬೈಲ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಷ್ಪಲತಾ ಅಂಚನ್, ಕಿರಣ್ ಶೆಟ್ಟಿ, ಸಿಬ್ಬಂದಿ ಕಮಲಾಕ್ಷ, ಧನರಾಜ್, ಮಮತಾ ಕುಲಾಲ್, ಸುಜಾತ, ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ನೆವಿಲ್ ಡಿಸೋಜ ಸ್ವಾಗತಿಸಿದರು.

ನೀರು ಎಲ್ಲಿಂದ ಬರತ್ತದೆ?
ಕಾರ್ಯಕ್ರಮದ ಬಳಿಕ ಸುಭಾಷ್ ನಗರದ ನಿವಾಸಿಗರು ಪಿಡಿಓ ಮತ್ತು ಪಂಚಾಯಿತಿ ಪ್ರತಿನಿಧಿಗಳಿಗೆ ಮುತ್ತಿಗೆ ಹಾಕಿ ಶುದ್ಧ ನೀರಿನ ಘಟಕ ಆರಂಭಿಸಲಾಗಿದೆ, ಇದಕ್ಕೆ ನೀರು ಎಲ್ಲಿಂದ ಹಾಕುತ್ತೀರಿ? ಗ್ರಾಮದಲ್ಲಿ ಎರಡು ದಿನಕ್ಕೊಮ್ಮೆ ನೀರು ಕೊಡಿ ಎಂದರೂ ನೀರಿಲ್ಲ, ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎನ್ನುವ ಸಬೂಬು ನೀಡುತ್ತಾರೆ. ಈಗ ಘಟಕಕ್ಕೆ ನೀರು ಎಲ್ಲಿಂದ ತರುತ್ತೀರಿ? ವಿದ್ಯುತ್ ಬಿಲ್ ಬರಿವುದಿಲ್ಲವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನನ್ನಲ್ಲಿ ಮಾತನಾಡಬೇಡಿ ಎಂದ ಪಿಡಿಓ!
ನೀರಿನ ಘಟಕ ಉದ್ಘಾಟನೆ ಬಳಿಕ ಸ್ಥಳೀಯರು ತಮ್ಮೂರಿನ ಸಮಸ್ಯೆ ಪ್ರಸ್ತಾಪಿಸಿದರು. ಈ ವಿಷಯವಾಗಿ ನಮ್ಮಲ್ಲಿ ಮಾತನಾಡಬೇಡಿ, ಮೇಲಧಿಕಾರಿಗಳಲ್ಲಿ ಮಾತನಾಡಿ, ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ ಎಂದು ಸಮಸ್ಯೆ ಹೇಳಿದವರನ್ನೇ ಪಿಡಿಓ ಗದರಿಸಿದರು. ಇದರಿಂದಾಗಿ ಸ್ಥಳೀಯರು ಆಕ್ರೋಶಗೊಂಡ ಕಾರಣ ಕೆಲಹೊತ್ತು ವಾಗ್ವಾದ ನಡೆಯಿತು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಧನಲಕ್ಷ್ಮೀ ಗಟ್ಟಿ, ನೀರಿನ ಸಮಸ್ಯೆ ಸಂಪೂರ್ಣ ಜಿಲ್ಲೆಯಲ್ಲಿತ್ತು, ಪಂಚಾಯಿತಿ ಮಟ್ಟದಲ್ಲಿ ಕೆಲಸ ನಿರ್ವಹಿಸಲಿ, ನಾವೆಲ್ಲರೂ ಜೊತೆಯಾಗಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹೋಗೋಣ, ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸೋಣ ಎಂದು ದಿನ ನಿಗದಿಪಡಿಸುವ ಮೂಲಕ ಸ್ಥಳೀಯರನ್ನು ಸಮಾಧಾನಪಡಿಸಿದರು.

Exit mobile version