Site icon Ullalavani

ಹರೇಕಳ: ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈಗೆ ಬೀಳ್ಕೊಡುಗೆ

UN NETWORKS

ಹರೇಕಳ : ನಾವಿರುವ ಈ ಸಮಾಜದಲ್ಲಿ ಸಾಮಾಜಿಕ ಆತಂಕದ ಪರಿಸ್ಥಿತಿಗಳು ಎದುರಾಗುವಾಗ ಅದನ್ನು ಸವಾಲಾಗಿ ಸ್ವೀಕರಿಸಲು, ಅಂತಹ ಬಹು ದೊಡ್ಡ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತಹ ಸಮರ್ಥ ವಿದ್ಯಾರ್ಥಿಗಳನ್ನು ಜವಬ್ದಾರಿಯುತರನ್ನಾಗಿ ಆರಂಭದ ಹಂತದಿಂದಲೇ ರೂಪಿಸುವುವುದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರು ಹೊರತು ಉನ್ನತ ಶಿಕ್ಷಣ ಕಲಿಸಿಕೊಡುವ ಪ್ರಾಧ್ಯಾಪಕರಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರೊ. ಪಿ.ಎಲ್. ಧರ್ಮ ಹೇಳಿದರು.

ಪಾವೂರು ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ 35ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಅವರನ್ನು ಶಾಲಾ ಆಡಳಿತ ಮಂಡಳಿ ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ವತಿಯಿಂದ ಬುಧವಾರ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅಭಿನಂದನಾ ಭಾಷಣ ಮಾಡಿದರು. ಈ ಜಿಲ್ಲೆಯ ಮಣ್ಣಿಗೆ ಯಾರೆಲ್ಲ ಕಾಲಿಟ್ಟಿದ್ದಾರೋ ಅವರೆಲ್ಲರನ್ನು ಈ ಮಣ್ಣು ಸ್ವೀಕರಿಸಿ ಅವರ ಸಾಧನೆಗೆ ನೀರೆರೆದು ಪೋಷಿಸಿದೆ. ಇಲ್ಲಿನ ದೈವ ದೇವರುಗಳ ಕೃಪಾಶೀರ್ವಾದವೂ ಇದೆ. ಬಾಲ್ಯದಲ್ಲಿ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತರುವ ಕಾರ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ವರ್ಗವೇ ಮಾಡುತ್ತದೆ. ಯಾಕೆಂದರೆ ಉನ್ನತ ಶಿಕ್ಷಣಕ್ಕೆ ತಲುಪುವ ವಿದ್ಯಾರ್ಥಿಗಳು ಇಪ್ಪತ್ತರಿಂದ ಇಪ್ಪತ್ತೆರಡರ ಹರೆಯದವರಾಗಿದ್ದು ಅವರನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ತಿದ್ದಿ ತೀಡಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವ ಎಲ್ಲ ಕಾರ್ಯ ಮಾಡಿ ಕಳುಹಿಸಿರುತ್ತಾರೆ. ಅಂತಹ ಶ್ರೇಷ್ಠ ಕಾರ್ಯದಲ್ಲಿ ರವೀಂದ್ರ ರೈ ಅವರ ಸ್ಥಾನ ಎತ್ತರದಲ್ಲಿದೆ ಎಂದು ನುಡಿದರು.

ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಮಾತನಾಡಿ ನಾನು ಈ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಆರಂಭಿಸಿ ಕಳೆದ 13ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕ ೃತಿಕವಾಗಿಯೂ ರಾಷ್ಟ್ರಮಟ್ಟದಲ್ಲಿ ಹೆಸರು ಸಂಪಾದಿಸಿದೆ. ಆಡಳಿತ ಮಂಡಳಿ ನನ್ನ ಕರ್ತವ್ಯದಲ್ಲಿ ಮನಸ್ಸಿಗೆ ಬೇಸರ ತರಿಸುವ, ತಪ್ಪಾಗಿದೆ ಎಂಬಂತಹ ಒಂದೇ ಒಂದು ಶಬ್ಧ ಹೇಳದಿರುವುದು ನನ್ನ ಶಿಕ್ಷಕ ವೃತ್ತಿಯ ಅನುಭವದಲ್ಲಿ ಮನಸ್ಸಿಗೆ ಬಹಳಷ್ಟು ಸಂತಸ ತಂದಿದೆ ಎಂದು ನುಡಿದರು. ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಹ್ಲಾದ್ ರೈ ಮುದಲೆಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸೆ ವಿಭಾಗ ಮುಖ್ಯಸ್ಥೆ ಪ್ರೊ. ಡಾ. ಅಮಿತಾ ಹೆಗ್ಡೆ, ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಚಿನ್ನಪ್ಪ ಗೌಡ, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ರಘುನಾಥ ರೈ, ಕೊಣಾಜೆ ಮಾಜಿ ಪಟೇಲ ರಘುರಾಮ ಕಾಜವ ಪಟ್ಟೋರಿ, ಕೊಣಾಜೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪ್ರಸಾದ ರೈ ಕಲ್ಲಿಮಾರು, ಆಡಳಿತ ಮಂಡಳಿಯ ಪದಾ„ಕಾರಿಗಳಾದ ರಾಜ್‍ಕುಮಾರ್ ಶೆಟ್ಟಿ, ಕಡೆಂಜ ಸೋಮಶೇಖರ ಚೌಟ, ಬಾಲಕೃಷ್ಣ ಮಾಣೈ, ಶಿಕ್ಷಕ ರಕ್ಷಕ ಸಂಘದ ಆಧ್ಯಕ್ಷೆ ಜಯಶ್ರೀ ತುಕರಾಮ್ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಡ್ವರ್ಡ್ ಐಮನ್ ಉಪಸ್ಥಿತರಿದ್ದರು.

ಶಿಕ್ಷಕ ರವಿಶಂಕರ್ ಸ್ವಾಗತಿಸಿದರು. ಸಂಚಾಲಕ ಜಯರಾಮ ಆಳ್ವ ಪೋಡಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸ್ಮಿತಾ ಸನ್ಮಾನ ಪತ್ರ ವಾಚಿಸಿದರು. ಪ್ರೌಢ ಶಾಲಾ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ತೆಂಕಬೈಲು ಕೃಷ್ಣ ಶಾಸ್ತ್ರಿ ವಂದಿಸಿದರು.

Exit mobile version