ಕೊಣಾಜೆ : ವ್ಯಕ್ತಿಗೆ ತನ್ನ ಬದುಕಲ್ಲಿ ತತ್ವ ಮತ್ತು ಬದ್ಧತೆ ಬಹಳ ಮುಖ್ಯವಾದುದು. ಪ್ರೊ.ಶಿವರಾಮ ಶೆಟ್ಟಿಯವರು ತನ್ನದೇ ಆದ ಬದ್ದತೆಯನ್ನು ಪಾಲಿಸಿಕೊಂಡು ವಿಭಾಗದಲ್ಲಿ ಪರಿಶ್ರಮದ ಸೇವೆ ಸಲ್ಲಿಸುವುದರೊಂದಿಗೆ ಕನ್ನಡ ವಿಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಅಭಯ ಕುಮಾರ್ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ನಡೆದ ಪ್ರೊ.ಶಿವರಾಮ ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಒಂದು ಉತ್ತಮ ವ್ಯಕ್ತಿತ್ವ, ತತ್ವ, ಬದ್ಧತೆಯೊಂದಿಗೆ ಸುಮಾರು 1980ರಿಂದಲೂ ವಿಭಾಗದಲ್ಲಿದ್ದು ಇದೀಗ ನಿವೃತ್ತಿಯವರೆಗೂ ಅದನ್ನು ಪಾಲಿಸಿಕೊಂಡು ಬಂದ ಶಿವರಾಮ ಶೆಟ್ಟಿಯವರ ನಿವೃತ್ತಿಯ ಬದುಕು ಸುಖದಾಯಕವಾಗಿರಲಿ ಹಾಗೂ ಇನ್ನಷ್ಟು ಸಂಶೋಧನಾ ಕಾರ್ಯವು ಅವರಿಂದ ನಡೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಅವರು, ಕೊಣಾಜೆಯಲಿದ್ದ ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರದ ಕೊನೆಯ ತಂಡದ ವಿದ್ಯಾರ್ಥಿಯಾಗಿದ್ದೆ. ಅಂದರೆ ಸುಮಾರು 1979-81 ಅವಧಿಯಿಂದ 2019 ರವರೆಗೆ ಇಲ್ಲಿಯ ವಿವಿಯಲ್ಲಿ ಕಳೆದ ಅನುಭವ ನನ್ನ ಬದುಕಿನಲ್ಲಿ ಮಹತ್ವಪೂರ್ಣವಾದುದು. ಎಲ್ಲರ ಬದುಕನ್ನು ಕಟ್ಟುವಂತಹ ಸಾರ್ವಜನಿಕ ಸಂಸ್ಥೆ ವಿಶ್ವವಿದ್ಯಾಲಯ. ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂಬ ಹೆಮ್ಮೆಯಿದೆ. ಕನ್ನಡ ವಿಭಾಗಕ್ಜೆ ಅದೆಷ್ಟೋ ಮಹನೀಯವರು ಸೇವೆ ಸಲ್ಲಿಸಿ ಕನ್ನಡಕ್ಕೆ ಅಪಾರಕೊಡುಗೆ ನೀಡಿದ್ದಾರೆ, ಕನ್ನಡವನ್ನು ನಮ್ಮ ಬೋಧನೆಯ ಮೂಲಕ, ಬರವಣಿಗೆಯ ಮೂಲಕ ಅಥವಾ ಸಂಶೋಧನೆಯ ಮೂಲಕ ಕಟ್ಟುವ ಕೆಲಸ ನಮ್ಮಿಂದ ಆಗಬೇಕಿದೆ. ಅಲ್ಲದೆ ಕನ್ನಡಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಂಶೋಧನೆಗಳು ನಡೆಯಬೇಕು, ಕನ್ನಡದ ನಿತ್ಯೋತ್ಸವ ಇಲಿ ನಿತ್ಯವೂ ನಡೆಯಬೇಕು. ಶ್ರಮ ಸಂಸ್ಕೃತಿಯೊಂದಿಗೆ ನಾವು ಮುನ್ನಡೆದು ದೇಶವನ್ನು ಕಟ್ಟೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ,ರಾಜಶ್ರೀ , ನಾಗೇಶ್ ನಾಯಕ್, ಕನ್ನಡ ವಿಭಾಗದ ಚಂದ್ರಶೇಖರ್ ಎಂ.ಬಿ, ವಿದ್ಯಾ, ಸುರೇಖ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗಕ್ಜೆ ಸೇರಿದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ವಿದ್ಯಾರ್ಥಿಗಳು ವಿಭಾಗಕ್ಕೆ ಸ್ವಾಗತಿಸಿದರು. ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಯೋಜಿಸಿದ್ದರು.