Site icon Ullalavani

ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ ಶೀಘ್ರದಲ್ಲೇ ಲೋಕಾರ್ಪಣೆ : ಮಾಜಿ ಸಚಿವ ಯು.ಟಿ.ಖಾದರ್

UN NETWORKS

ಉಳ್ಳಾಲ : ಗ್ರಾಮಮಟ್ಟದಲ್ಲಿ ವಿಶೇಷ ಅನುಮತಿ ಪಡೆದುಕೊಂಡು ,  ಗುಲಾಂ ನಬಿ ಆಝಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭ ಪಡೆದುಕೊಂಡ ಅನುಮತಿಯಡಿ ನಗರದಿಂದ ಕೇವಲ ಆರು ಕಿ.ಮೀ ದೂರದ ಉಳ್ಳಾಲದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ ಜನರ ಸೇವೆಗೆ ಸಿದ್ಧಗೊಂಡಿದೆ. ಶೀಘ್ರದಲ್ಲೇ  ಲೋಕಾರ್ಪಣೆಗೊಳ್ಳಲಿದೆ ಎಂದು  ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಉಳ್ಳಾಲದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸವಲತ್ತುಗಳನ್ನು, ಉಪಕರಣಗಳನ್ನು ವೀಕ್ಷಿಸಿ ಬಳಿಕ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೆ ಉಳ್ಳಾಲ ಗ್ರಾಮವಾಗಿದ್ದ ಸಂದರ್ಭ ವಿಶೇಷ ಅನುಮತಿಯನ್ನು ಪಡೆಯಲಾಗಿತ್ತು.  ಇದೀಗ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಶವಾಗಾರ, ಪೋಸ್ಟ್ ಮಾರ್ಟಂ ವ್ಯವಸ್ಥೆ, ವೈದ್ಯರ ಕ್ವಾಟ್ರರ್ಸ್ , ಅತ್ಯಾಧುನಿಕ ಉಪಕರಣಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ಸಿಬ್ಬಂದಿ , ವೈದ್ಯರು ಹಾಗೂ ಉಪಕರಣಗಳ ಕೊರತೆಯಿಂದಾಗಿ ಉದ್ಘಾಟನೆ ವಿಳಂಬವಾಗಿದೆ.  ಸದ್ಯ ಕಿರು ಆಸ್ಪತ್ರೆಯಲ್ಲಿರುವ ಎಲ್ಲಾ ರೀತಿಯ ಉಪಕರಣಗಳು  ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.  ಮೂವರು ಎಂಬಿಬಿಎಸ್ ವೈದ್ಯರು, ಸ್ತ್ರೀರೋಗತಜ್ಞ, ಮಕ್ಕಳ ತಜ್ಞ, ಫಿಸಿಷಿಯನ್,  ದಂತ ವೈದ್ಯರು ,ಅನಸ್ತೇಷಿಯಾ ತಜ್ಞರನ್ನು  ನೇಮಿಸಲಾಗಿದೆ. ಜನಸಾಮಾನ್ಯರು  ಇರುವ ವ್ಯವಸ್ಥೆಯಲ್ಲೇ ಸದ್ಯದಿಂದಲೇ ಸೇವೆಯನ್ನು ಪಡೆದುಕೊಳ್ಳಬಹುದು. ಆಸ್ಪತ್ರೆ  ಊರಿನವರ ಆಸ್ತಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಗಾಗಿ  ಸಮಿತಿಯನ್ನು ರಚಿಸಲಾಗುವುದು. ಸಮಿತಿಯಲ್ಲಿ ಸ್ಥಳೀಯ ನಗರಸಭೆ ಸದಸ್ಯರು,  ಹಾಗೂ ಹಿಂದಿನಿಂದ ಆಸ್ಪತ್ರೆಯ ಜತೆಗೆ ಒಡನಾಟದಲ್ಲಿದ್ದ ಹಿರಿಯ ಕುಂಞÂಮೋನು, ಕಲಾವತಿ ಹಾಗೂ ಮೋಂತಿ ಡಿಸೋಜ ಅವರು ಇರಲಿದ್ದಾರೆ. ಆರಂಭದಲ್ಲಿ ಸಿಬ್ಬಂದಿ ಕೊರತೆ ಎದುರಾದರೂ , ಅವರನ್ನು ನೇಮಿಸುವ ಪ್ರಕ್ರಿಯೆನ್ನು ನಡೆಸಲಾಗುವುದು. ಆಸ್ಪತ್ರೆಯಲ್ಲಿ ಹಿರಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯುರ್ವೇದ ಚಿಕಿತ್ಸೆಯೂ ಉಚಿತವಾಗಿ  ನೀಡಲಾಗುವುದು ಎಂದರು. 

ಉಳ್ಳಾಲದಾದ್ಯಂತ ಅಭಿವೃದ್ಧಿ ಕಾರ್ಯಗಳು : ಅಬ್ಬಕ್ಕ ವೃತ್ತದಿಂದ ಸೋಮೇಶ್ವರ ಆಗಿ ಕೋಟೆಕಾರು ಬೀರಿ  ಸಂಪರ್ಕಿಸುವ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣಕ್ಕಾಗಿ 6.6 ಕೋಟಿ  ರೂ. ಅನುದಾನ ಬಿಡುಗಡೆಯಾಗಿದೆ. ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ  ಅಬ್ಬಕ್ಕ ವೃತ್ತದವರೆಗೆ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು  ಸುಂದರೀಕರಣಗೊಳಿಸಲು ಮತ್ತೆ 9.5 ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್ ಕರೆಯಲಾಗಿದೆ. ಅಬ್ಬಕ್ಕ ವೃತ್ತದಿಂದ ಕೋಡಿವರೆಗೆ ಕನಿಷ್ಟ ಎರಡು ಬಸ್ಸುಗಳಿಗೆ ಹೋಗಲು 7 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.  ಕುಡಿಯುವ ನೀರಿಗೆ 220 ಕೋಟಿ ರೂ. ಅನುದಾಣ ಬಿಡುಗಡೆಯಾಗಿದೆ. ಕೊಣಾಜೆಯ ಕಂಬಳಪದವಿನಲ್ಲಿ ವಾಟರ್ ಟ್ರೀಟ್‍ಮೆಂಟ್ ಪ್ಲಾಂಟ್ ರಚನೆ, ಈ ಮೂಲಕ ತುಂಬೆಯಿಂದ ನೇರ ನೀರು ಕ್ಷೇತ್ರಕ್ಕೆ ಬರುವಂತಹ ವ್ಯವಸ್ಥೆ ಹಾಗೂ  ಯುಜಿಡಿಗೆ 32 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಧಾರ್ಮಿಕ ಕೇಂದ್ರಗಳಿಗೆ ಯಾತ್ರಿ ನಿವಾಸ, ಪ್ರವಾಸಿ ಕೇಂದ್ರಗಳ ನಿರ್ಮಾಣ, ಯುಜಿಡಿ, ಕುಡಿಯುವ ನೀರು ರಸ್ತೆ ಪ್ರದೇಶದ ಅಭಿವೃದ್ಧಿಯ ಸಂಕೇತ ಆಗಿರುವುದರಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಉಳ್ಳಾಲವನ್ನು ಸ್ವಚ್ಛ ಹಾಗೂ ಆರೋಗ್ಯವಂತ ನಗರವನ್ನಾಗಿ ರೂಪಿಸಲು ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳ ಸಹಕಾರವನ್ನು ಪಡೆಯಲಾಗುವುದು. ಘನತ್ಯಾಜ್ಯದ  ಜನಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. 

`ಯಾರೇ ಬಂದರೂ ಅನುದಾನ ತರುವ ಶಕ್ತಿ ನನ್ನಲ್ಲಿದೆ’ : ನೂತನ ಬಿಜೆಪಿ ಸರಕಾರ ಶಾಶ್ವತವಲ್ಲ. ಸಾಂವಿಧಾನಿಕವಾಗಿ ಬಹುಮತವನ್ನು ಸಾಬೀತುಪಡಿಸದೆ  ಸರಕಾರವನ್ನು ರಚಿಸಲಾಗಿದೆ. ಯಾವ ಹಂತದಲ್ಲಾದರೂ ಉರುಳುವುದು ಖಚಿತ.  ಹೊಸ ಸರಕಾರದಿಂದ ನನ್ನ ಕ್ಷೇತ್ರದ ಅಭಿವೃದ್ಧಿಯ ಅನುದಾನಗಳಿಗೆ ಕೊರತೆ ಎದುರಾದಲ್ಲಿ ಅದನ್ನು ತರುವ  ಶಕ್ತಿ ನನ್ನಲ್ಲಿದೆ ಅನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರನ್ ನಡೆಯನ್ನು ಶ್ಲಾಘಿಸಿದ ಮಾಜಿ ಸಚಿವ ಖಾದರ್,  ಸ್ವಾರ್ಥಕ್ಕಾಗಿ  ಕೆಲಸ ಮಾಡುವವರನ್ನು ಪಕ್ಷಾಂತರ ಕಾಯಿದೆ ಮೂಲಕ ಅನರ್ಹಗೊಳಿಸಿರುವುದು ಸ್ವಾಗತಾರ್ಹ.  ಎಲ್ಲಾ ಪಕ್ಷಾಂತರ ಶಾಸಕರಿಗೆ  ಕಾಯಿದೆ ಅನ್ವಯವಾಗುವಂತೆ ಸಮರ್ಪಕವಾಗಿ ಜಾರಿಯಾಗುವ ವಿಶ್ವಾಸವಿದೆ. ಅತೃಪ್ತ ಶಾಸಕರೆಲ್ಲರೂ  ಈಗ ಮುಂಬೈನಲ್ಲಿದ್ದಾರೆ, ಮುಂದೆ ಅನರ್ಹವನ್ನು ಪ್ರಶ್ನಿಸಿ  ಸುಪ್ರೀಂ  ಮೆಟ್ಟಿಲೇರುತ್ತಾರೆ. ಅವರು ಖಾಯಂ ಆಗಿ ಮುಂಬೈ ಟು ದೆಲ್ಲಿ ಸುತ್ತಾಡುತ್ತಲೇ  ಇರುವುದರಲ್ಲಿ ಸಂಶಯವಿಲ್ಲ.  ಈ ಮೂಲಕ ದೇಶಕ್ಕೆ ಉತ್ತಮ ಸಂದೇಶ ಹೋಗಬೇಕು. ಖಚಿತ 112 ಶಾಸಕರು ಇದ್ದಲ್ಲಿ ಮಾತ್ರ ಸರಕಾರ ರಚಿಸುವುದು ಸಂವಿಧಾನಾತ್ಮಕ ಎಂದರು. 

ಉಳ್ಳಾಲ ತೊಕ್ಕೊಟ್ಟು ವ್ಯಾಪ್ತಿಯಲ್ಲೂ ವ್ಯಾಪಕ ಡೆಂಗ್ಯು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ಎಲ್ಲರೂ ಕಾಯಿಲೆ ನಿರ್ಮೂಲನೆ ಸಹಕರಿಸಬೇಕಿದೆ. ಆಶಾ ಕಾರ್ಯಕರ್ತೆಯರು,  ಪಂಚಾಯಿತಿ ಸದಸ್ಯರು ಎಲ್ಲರೂ  ಜನಜಾಗೃತಿ  ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.  ಮೊಗವೀರಪಟ್ನ ತೀರದಲ್ಲಿ ಉಳ್ಳಾಲದ ತ್ಯಾಜ್ಯ ನೀರು ಹರಿಯುವುದರ ಕುರಿತು ಮಾತನಾಡಿದ ಶಾಸಕ ಖಾದರ್, ಸಮುದ್ರ ತೀರ ತಗ್ಗು ಪ್ರದೇಶವಾಗಿದೆ.  ಸಮುದ್ರ ತೀರದಲ್ಲೇ ಮನೆ ನಿರ್ಮಿಸಿರುವುದು ತಪ್ಪು. ಆದರೆ ಮಾನವೀಯತೆ ದೃಷ್ಟಿಯಿಂದ ಬಿಡಲಾಗಿದೆ.  ತ್ಯಾಜ್ಯ ನೀರು ಶೇಖರೆಯಾಗುವುದುನ್ನು ನಿಲ್ಲಿಸಲು ಅಸಾಧ್ಯ.  ಯುಜಿಡಿ ಬರುವವರೆಗೆ ಸಮಸ್ಯೆ  ಮುಂದುವರಿಯುತ್ತಲೇ ಇರುತ್ತದೆ ಎಂದರು. 

ಸುದ್ಧಿಗೋಷ್ಠಿಯಲ್ಲಿ ಮುಖಂಡರುಗಳಾದ ಈಶ್ವರ್ ಉಳ್ಳಾಲ್, ನಗರಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು ಮುಂತಾದವರು ಉಪಸ್ಥಿತರಿದ್ದರು. 

Exit mobile version