Site icon Ullalavani

ತೊಕ್ಕೊಟ್ಟು ಕೃತಕ ನೆರೆ: ಪಾದಚಾರಿಗಳಿಗೆ ಸಂಕಷ್ಟ

UN NETWORKS

ತೊಕ್ಕೊಟ್ಟು : ಬೆಳಗ್ಗಿನಿಂದ ಸುರಿದ ಭಾರೀ ಮಳೆಗೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕೃತಕ ನೆರೆಯಾಯಿತು. ಇದರಿಂದ ಫ್ಲೈಓವರ್ ಕೆಳಗಡೆ ತೆರಳುವ ವಾಹನ ಸವಾರರು ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಗುರುವಾರ ಬೆಳಗ್ಗಿನಿಂದ ಎಡಬಿಡದೆ ಸುರಿದ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್ ಇಡೀ ಜಲಾವೃತಗೊಂಡಿತು. ಸರ್ವಿಸ್ ರಸ್ತೆಯಲ್ಲಿಡೀ ಮೊಣಕಾಲುದ್ದಕ್ಕೆ ನೀರು ನಿಂತು ಪಾದಚಾರಿಗಳು ಪರದಾಡಬೇಕಾಯಿತು. ಫ್ಲೈಓವರ್ ಕೆಳಗಡೆಯಿಂದ ಸಂಚರಿಸುವ ವಾಹನ ಸವಾರರು ರಸ್ತೆಯಲ್ಲಿ ಹರಿದ ನೀರಿನಿಂದಾಗಿ ಪರದಾಡಬೇಕಾಯಿತು.

ಅಸರ್ಮಪಕ ಚರಂಡಿ ನಿರ್ವಹಣೆ : ಭಟ್ನಗರದಿಂದ ತೊಕ್ಕೊಟ್ಟು ಹಾದುಹೋಗುವ ಚರಂಡಿ ಬ್ಲಾಕ್ ನಿಂದಾಗಿ ಸಮಸ್ಯೆ ಉದ್ಭವಿಸಿದೆ. ಚರಂಡಿ ತೆರವಿಗೆ ಉಳ್ಳಾಲ ನಗರಸಭೆ ಅಧಿಕೃತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಬೇಕಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಯನ್ನು ನಿರ್ವಹಿಸುವ ಗುತ್ತಿಗೆ ಕಂಪೆನಿಯವರಿಗೂ ತೆರವುಗೊಳಿಸುವ ಜವಾಬ್ದಾರಿಯಿದೆ . ಆದರೆ ಸ್ಥಳೀಯಾಡಳಿತ ಕ್ರಮಕೈಗೊಂಡಲ್ಲಿ ರಾ.ಹೆ ಕೂಡಲೇ ಕ್ರಮಕೈಗೊಳ್ಳುತ್ತದೆ. ಆದರೆ ಈವರೆಗೂ ಸ್ಥಳೀಯ ಸದಸ್ಯರಾಗಲಿ, ನಗರಸಭೆ ಕಮೀಷನರ್ ಆಗಲಿ ಮನವಿ, ದೂರು ಸಲ್ಲಿಸದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವವಾಗಿದೆ ಅನ್ನುವುದು ಸ್ಥಳೀಯ ಚಾಲಕರೊಬ್ಬರ ಆರೋಪ.

ಫ್ಲೈಓವರ್ ನಿದ ಜಲಪಾತದಂತೆ ಇಳಿಯುತ್ತಿದೆ ಮಳೆ ನೀರು: ತೊಕ್ಕೊಟ್ಟು ನೂತನ‌ ಫ್ಲೈಓವರ್ ಮೇಲ್ಭಾಗದಿಂದ ಕೆಳಗೆ ರಸ್ತಗೆ ಜಲಪಾತದಂತೆ ನೀರು ಇಳಿಯುತ್ತಿದೆ. ಇದರಿಂದಾಗಿ ಸರ್ವಿಸ್ ರಸ್ತೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕೆಲ ‌ತಿಂಗಳ ಹಿಂದೆ ಸಂಚಾರಿ ಪೊಲೀಸ್ ಮರಸಾಗಾಟದ ಲಾರಿಯನ್ನು ನಿಲ್ಲಿಸಲು ಸೂಚಿಸಿದ ಸಂದರ್ಭ ಚಾಲಕ ರಸ್ತೆ‌ಬದಿಯ ಚರಂಡಿ ಮೇಲೆ ನಿಲ್ಲಿಸಿದ್ದರು. ಈ ಸಂದರ್ಭ ಚರಂಡಿ ಮೇಲೆ ಹಾಸಲಾದ ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ ಲಾರಿ ಮಗುಚಿಬಿದ್ದ ಪರಿಣಾಮ ಲಾರಿ ಕ್ಲೀನರ್ ಸಾವನ್ನಪ್ಪಿದ್ದರು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ವಿರುದ್ಧ ಹಾಗೂ ಸಂಚಾರ ಪೊಲೀಸರ ವಿರುದ್ಧ ಪ್ರತಿಭಟನೆ ನಡೆದಿತ್ತು. ಅಲ್ಲಿಂದ ಚರಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಇದರಿಂದಾಗಿ ಭಟ್ನಗರ ಭಾಗದಿಂದ ಹರಿದು ಬರುವ ನೀರು , ರಸ್ತೆಯ ಮೇಲೆ ಹರಿಯುತ್ತಿದೆ . ಇದರಿಂದ ಸ್ಥಳೀಯ ಅಂಗಡಿಗಳು ಜಲಾವೃತವಾಗುತ್ತಿದೆ ಅನ್ನುವುದು ನಿತ್ಯಾಧರ್ ಪೇಪರ್ ಏಜೆನ್ಸಿ ಅಂಗಡಿ ಮಾಲೀಕ ನವೀನ್ ಡಿಸೋಜ ಅವರ ಅಭಿಪ್ರಾಯ.

ಸ್ಥಳೀಯರಿಗೆ ಸಂಕಷ್ಟ : ಫ್ಲೈಓವರ್ ಉದ್ಘಾಟನೆ ಬಳಿಕ ಸ್ಥಳೀಯ ಜನರ ಮೂಲಭೂತ ವ್ಯವಸ್ಥೆ ಅಸಮರ್ಪಕ ವಾಗಿದೆ. ಸರ್ವಿಸ್ ರಸ್ತೆ ಅವೈಜ್ಞಾನಿಕ ಆಗಿರುವುದರಿಂದ ಸ್ಥಳೀಯರು ತೊಂದರೆಗೀಡಾಗುವಂತಾಗಿದೆ. ಒಂದೆಡೆ ರಸ್ತೆ ಡಾಮರೀಕರಣ ಕಿತ್ತು ಹೋಗಿದ್ದರೆ, ಅಲ್ಲಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆಯೂ ಕಿರಿದಾಗಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳಿಗೆ ಪಾರ್ಕಿಂಗ್ ವ್ಯವಸ್ಥೆಯೂ ಸರಿಯಿಲ್ಲದೆ, ವ್ಯಾಪಾರದಲ್ಲೂ ನಷ್ಟ ಉಂಟಾಗುತ್ತಿದೆ. ದೂರ ದೂರಿನಿಂದ ತೆರಳುವ ವಾಹನ ಸವಾರರು ಆರಾಮವಾಗಿ ಫ್ಲೈಓವರ್ ಮೂಲಕ ಚಲಿಸುತ್ತಿದ್ದರೆ, ನಿರ್ಮಿಸಲು ಅವಕಾಶ ಮಾಡಿಕೊಟ್ಟ ಸ್ಥಳೀಯ ಜನತೆ ಮಾತ್ರ ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ.

ನೋಟೀಸ್ ಜಾರಿ : ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಹಾಗೂ ವಸತಿ ಸಂಕೀರ್ಣ ಕಾಮಗಾರಿಯಿಂದಲೂ ಸಮಸ್ಯೆ ಉದ್ಭವವಾಗಿದೆ. ಕಾಮಗಾರಿ ವೇಳೆ ಮರಳು, ಕಲ್ಲು ಇತ್ಯಾದಿ ಕಟ್ಟಡ ಸಾಮಗ್ರಿ ಸಾರ್ವಜನಿಕ ಸ್ಥಳದಲ್ಲೇ ದಾಸ್ತಾನಿನಿಂದಾಗಿ ನೀರು ಇಕ್ಕಟ್ಟಾಗುತ್ತಿದೆ. ಅದಕ್ಕಾಗಿ ಬುಧವಾರ ಬೆಳಗ್ಗಿನಿಂದಲೇ ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ದಂಡ ವಿಧಿಸಲಾಗಿದೆ. ಒಂದು ದಿನದ ಸಮಯಾವಕಾಶವನ್ನು ಕಟ್ಟಡ ಮಾಲೀಕರು ಕೋರಿದ್ದಾರೆ. ಸಮಸ್ಯೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಚರಂಡಿ ತೆರವಿಗೆ ಮನವಿ ಸಲ್ಲಿಸಲಾಗುವುದು. ಬುಧವಾರ ಬೆಳಗ್ಗಿನಿಂದ ನಗರಸಭೆ ಸಿಬ್ಬಂದಿಯನ್ನು ತೊಕ್ಕೊಟ್ಟು ಭಾಗದಲ್ಲಿ ನಿಲ್ಲಿಸಿದ್ದೇವೆ. ನೀರು ನಿಂತರೂ 20 ನಿಮಿಷಗಳಲ್ಲಿ ಖಾಲಿಯಾಗುತ್ತಿದೆ. ಇದರಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಚರಂಡಿಯನ್ನು ರಾ.ಹೆ ಪ್ರಾಧಿಕಾರ ಶೀಘ್ರವೇ ತೆರವುಗೊಳಿಸುವ ಭರವಸೆ ನೀಡಿದ್ದಾರೆ ಎಂದು ಉಳ್ಳಾಲ ನಗರಸಭೆ ಕಮೀಷನರ್ ವಾಣಿ ಆಳ್ವ ತಿಳಿಸಿದ್ದಾರೆ.

Exit mobile version