UN NETWORK
ದೇರಳಕಟ್ಟೆ : ಯುವಸಮುದಾಯ ಶಿಕ್ಷಣದ ಜೊತೆಗೆ ವೃತ್ತಿಪರತೆಯಲ್ಲಿ ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಆರ್. ವೆಂಕಟ ರಾವ್ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಮನನ ಸಭಾಂಗಣದಲ್ಲಿ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಆಶ್ರಯದಲ್ಲಿ ನಡೆದ 9ನೇ ವರ್ಷದ ಪ್ರೊ.ಎನ್. ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸದಲ್ಲಿ ಜೀವನದಲ್ಲಿ ನೀತಿಶಾಸ್ತ್ರ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಶಿಕ್ಷಣ ಸಂಸ್ಥೆಗಳು ಎಂದಿಗೂ ಜೀವತ್ವವನ್ನು ಪಡೆಯುತ್ತದೆ. ಮನುಷ್ಯರಿಗೆ ವಯಸ್ಸಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀಧರ್ ಶೆಟ್ಟಿ ವ್ಯಕ್ತಿಯಲ್ಲ, ಅವರೊಬ್ಬರು ಶಿಕ್ಷಣ ಸಂಸ್ಥೆಯಿದ್ದಂತೆ. ವಿಶ್ವವೇ ಭಾರತದ ಯುವಸಮುದಯಾವನ್ನು ಎದುರುನೋಡುತ್ತಿದೆ. ಬರಾಕ್ ಒಬಾಮ ಚುನಾವಣಾ ಸಂದರ್ಭ ನಡೆಸಿದ ಭಾಷಣದಲ್ಲಿ ನಾಸಾ, ಸಿಲಿಕಾನ್ ಸಿಟಿ ಅಮೆರಿಕಾದ ಮಹತ್ವದ ಸಂಸ್ಥೆಗಳೆಂದು ಚುನಾವಣೆ ಸಂದರ್ಭ ತಿಳಿಸಿದ್ದರು. ಅಂತಹ ಸಂಸ್ಥೆಗಳಲ್ಲಿ ಶೇ.40 ರಷ್ಟು ಭಾರತೀಯ ಯುವಪ್ರತಿಭೆಗಳ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಪಾತ್ರ ವಹಿಸಿರುವುದು ಗಮನಾರ್ಹ. ಈ ಮೂಲಕ ವೃತ್ತಿಪರತೆಯಲ್ಲಿ ಭಾರತೀಯ ಯುವಪ್ರತಿಭೆಗಳು ನೈತಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ . ವೈದ್ಯರು, ಇಂಜಿನಿಯರ್ ಶಿಕ್ಷಣ ಸಿಕ್ಕಿದಲ್ಲಿ ಮಾತ್ರ ಉತ್ತಮ ವೃತ್ತಿಪರರಾಗುವುದಿಲ್ಲ. ಶಿಕ್ಷಣದ ಜತೆಗೆ ಜೀವನದ ಮೌಲ್ಯಗಳನ್ನು ಅಳವಡಿಸಿದಾಗ ವೃತ್ತಿಪರರಾಗಲು ಸಾಧ್ಯ. ತಾವು ಮಾಡುವ ಉತ್ತಮ ಕೆಲಸಗಳನ್ನು ಯಾರೂ ನೋಡದಾಗ ಮಾಡುವವರು ಉತ್ತಮ ವೃತ್ತಿಪರರಾಗಲು ಸಾಧ್ಯ. ಸಮಗ್ರತೆಯನ್ನು ಅಳವಡಿಸಿಕೊಂಡು ಇತರರ ಕಾಳಜಿಯನ್ನು ಇಟ್ಟುಕೊಳ್ಳುವ ಮನೋಭಾವವನ್ನು ರೂಪಿಸಿಕೊಳ್ಳಿ ಎಂದ ಅವರು ಮಾಡುವ ಕೆಲಸವನ್ನು ಉತ್ಸಾಹದಿಂದ ಮಾಡುತ್ತಾ ಸಹಾನುಭೂತಿಯನ್ನು ಬೆಳೆಸಬೇಕಿದೆ. ಅಭಿವೃದ್ಧಿಯ ಜನರಿಲ್ಲದೆ ದೇಶ ಅಭಿವೃದ್ಧಿಯಾಗಲು ಅಸಾಧ್ಯ. ಮುಕ್ತ ಮನಸ್ಸಿನವರಿಂದ ದೇಶದ ಅಭಿವೃದ್ಧಿಯೂ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್ ವಿನಯ್ ಹೆಗ್ಡೆ ಮಾತನಾಡಿ ಎ.ಬಿ ಶೆಟ್ಟಿ ದಂತ ವಿದ್ಯಾಲಯ ವಿಶ್ವದಾದ್ಯಂತ ದಂತ ವೈದ್ಯರನ್ನು ಸಮಾಜಕ್ಕೆ ನೀಡಿದೆ. ಇದರಲ್ಲಿ ಅಂದಿನ ಡೀನ್ ಡಾ.ಶ್ರೀಧರ್ ಶೆಟ್ಟಿ ಅವರು ಅವರನ್ನು ಶಿಸ್ತು ಹಾಗೂ ನೈತಿಕ ಶಿಕ್ಷಣವನ್ನು ಬೋಧಿಸಿರುವುದರಿಂದ ಎಲ್ಲರೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಈ ಮೂಲಕ ಶಿಕ್ಷಣ ಸಂಸ್ಥೆಯನ್ನು ಖ್ಯಾತಿಗೊಳಿಸಲು ಸಾಧ್ಯವಾಗಿದೆ . ಅಸಮಾನ್ಯ ವ್ಯಕ್ತಿತ್ವ ಹೊಂದಿರುವ ಡಾ.ಶ್ರೀಧರ್ ಶೆಟ್ಟಿಯವರು ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಆರಂಭದಿಂದಲೂ ನಿವೃತ್ತಿಯವರೆಗೂ ಮಾಡಿದ ಆದರ್ಶ ಸೇವೆಯಿಂದಾಗಿ ದೇಶದ ಐದು ಕಾಲೇಜುಗಳಲ್ಲಿ ಎ.ಬಿ ಶೆಟ್ಟಿ ಕಾಲೇಜನ್ನು ಒಂದನ್ನಾಗಿಸುವಲ್ಲಿನ ಪಾತ್ರ ಮಹತ್ವ ಪಡೆದಿದೆ ಎಂದರು.
ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಪ್ರೊ.ಎನ್ ಶ್ರೀಧರ್ ಶೆಟ್ಟಿ ಮಾತನಾಡಿ ಜೀವನದ ಗುಣಮಟ್ಟವನ್ನು ಸ್ಥಾಪಿಸಲು ಶಾಶ್ವತ ಮೌಲ್ಯಗಳನ್ನು ಅಳವಡಿಸಿದಾಗ ಸಾಧ್ಯ. ಅದರಂತೆ ಎ.ಬಿ ಶೆಟ್ಟಿ ಕಾಲೇಜು ಮುಖ್ಯಸ್ಥರ ಕಾಳಜಿಯಂತೆ ವಿದ್ಯಾರ್ಥಿಗಳನ್ನು ಶಿಸ್ತು ಹಾಗೂ ಬದ್ಧತೆಯಿಂದ ಬೆಳೆಸಲು ಸಾಧ್ಯವಾಯಿತು. ಇದರಿಂದಾಗಿ ಇಂದಿಗೂ ತನ್ನನ್ನು ವಿದ್ಯಾರ್ಥಿಗಳು ಗೌರವಿಸುತ್ತಿರುವುದು ಜೀವನದಲ್ಲಿ ಅತ್ಯಂತ ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ ಶಾಂತಾರಾಮ ಶೆಟ್ಟಿ , ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಉಪಸ್ಥಿತರಿದ್ದರು.ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಯಸ್.ಕೃಷ್ಣ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ದತ್ತಿ ಉಪನ್ಯಾಸದ ಸಂಯೋಜಕ ಡಾ.ಸುಭಾಷ್ ಬಾಬು ವ್ಯಕ್ತಿ ಪರಿಚಯ ನೀಡಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ.ಅಮರಶ್ರೀ ಎ. ಶೆಟ್ಟಿ ವಂದಿಸಿದರು. ಡಾ.ಡಿಲಿಷಾ ವಂದಿಸಿದರು.