UN NETWORKS
ತಲಪಾಡಿ : ವಿದ್ಯಾರ್ಥಿಗಳು ಇಂತಹ ವ್ಯಸನದ ಕುರಿತು ಎಚ್ಚರಿಕೆಯಿಂದ ಇರಬೇಕು. ತಮ್ಮ ಸುತ್ತಮುತ್ತಲೂ ಮಾದಕ ವ್ಯಸನದ ವಿರುದ್ಧ ಜಾಗೃತಿಯನ್ನು ಮೂಡಿಸಿ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ತಮ್ಮ ಹಸ್ತವನ್ನು ಜೋಡಿಸಬೇಕು ಎಂದು ಮಂಗಳೂರು ಯೇನೆಪೊಯ ವೈದ್ಯಕೀಯ ಕಾಲೇಜಿನ ಓರಲ್ ಪಥೋಲೊಜಿ ವಿಭಾಗದ ಡಾ| ರುಬೆನ್ ಅಭಿಪ್ರಾಯಪಟ್ಟರು.
ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಮಾದಕ ವಸ್ತುಗಳು ಮಾನವನ ಮೆದುಳಿನ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಹದಿಹರೆಯದ ವಿದ್ಯಾರ್ಥಿಗಳು ಮುಖ್ಯವಾಗಿ ಈ ಮಾದಕ ವ್ಯಸನದ ಚಟಕ್ಕೆ ಬಲಿಯಾಗುತ್ತಾರೆ. ಒಮ್ಮೆ ಈ ಚಟದ ದಾಸರಾದರೆ ಇದರಿಂದ ಹೊರ ಬರಲು ತುಂಬಾ ಕಷ್ಟ ಸಾಧ್ಯ. ಮಾದಕ ವ್ಯಸನವು ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಜೀವನದ ಮೇಲೆಯೂ ಪರಿಣಾಮ ಬೀರಿ ಆತನ ನೈತಿಕ ಅಥಪತನಕ್ಕೆ ಕಾರಣವಾಗುತ್ತದೆ. ಆತ ಸಮಾಜಕ್ಕೆ ಕಂಟಕನಾಗುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಮಾದಕ ವ್ಯಸನದ ತೊಂದರೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್ ವಹಿಸಿದ್ದರು. ದೃಶ್ಯ ಮಾಧ್ಯಮದ ಮೂಲಕ ಮಾದಕ ವ್ಯಸನದ ದುಷ್ಪರಿಣಾಮದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಆಂಗ್ಲ ಶಿಕ್ಷಕಿ ಕನಿಯವಳ್ ಸ್ವಾಗತಿಸಿ ವಂದಿಸಿದರು.