UN NETWORKS
ಮಂಗಳೂರು : ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮಂಗಳೂರು ದಕ್ಷಿಣ ವಲಯ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರವು ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದ.ಕ.,ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಬ್ಯಾರಿ ಅವರು ಒಬ್ಬ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆ ಇದೆ ಎಂದು ಗಮನಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವವುಳ್ಳದ್ದು. ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶೈಕ್ಷಣಿಕವಾಗಿ ಕಾರ್ಯ ಚಟುವಟಿಕೆ ಮಾಡುವುದಲ್ಲದೇ, ಸಮಾಜಮುಖಿಯಾಗಿ ರೋಗಿಗಳಿಗೆ, ಆಸಕ್ತರಿಗೆ ದಾನ, ಧರ್ಮ ಮಾಡುವ ಮುಖೇನ ದೈವತ್ವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ವಿಷ್ಣು ಹೆಬ್ಬಾರ್ ಅವರು ಶಾಲೆಯಲ್ಲಿ ಶಿಸ್ತು, ಸಮಾಜದೊಂದಿಗೆ ಬಾಂಧವ್ಯ, ವಿದ್ಯಾರ್ಥಿಗಳ ರಕ್ಷಣೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚಿನ ಮುತುವರ್ಜಿ ಇಡುವುದರಿಂದ ಶಾಲೆ ಬೆಳಗಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಂ ಯೆನೆಕಲ್ಲು ಇವರನ್ನು ಸನ್ಮಾನಿಸಲಾಯಿತು. ಕಾರ್ಯಾಗಾರಗಳನ್ನು ಸಂಘಟಿಸಿದ ಶಾಲೆಗಳನ್ನು ಅಭಿನಂದಿಸಲಾಯಿತು. ಸುವರ್ಣ ಮಹೋತ್ಸವವನ್ನು ಆಚರಿಸಲಿರುವ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸುವರ್ಣ ಸಂಚಿಕೆಯ ಜಾಹೀರಾತಿನ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಪ್ಲಾಸೀ ತೌರೋ, ಮುಖ್ಯೋಪಾಧ್ಯಾಯಿನಿ ನಂದ ಗಡಿಯಾರ್, ಸಂಘದ ಉಪಾಧ್ಯಕ್ಷರಾದ ಲಿಲ್ಲಿ ಪಾೈಸ್, ಪ್ರಮೋದ್ ಕುಮಾರ್ ರೈ, ಪ್ರೀತಂ ಉಳ್ಳಾಲ, ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಾಜೀವ್ ನಾಯಕ್ ವರದಿ ವಾಚಿಸಿದರು.ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರ ಲೆಕ್ಕಪತ್ರ ಮಂಡನೆ ಮಾಡಿದರು. ಸುನಿತ ಪ್ರಾರ್ಥಿಸಿದರು.ಶೇಖರ್ ಕಡ್ತಲ ನಿರೂಪಿಸಿದರು.