UN NETWORKS
ಉಳ್ಳಾಲ: ಒಂದು ವಾರದಲ್ಲಿ ಸಮುದ್ರ ತೀರದಲ್ಲಿರುವ ಟ್ಯಾಂಕ್ ತೆರವುಗೊಳಿಸದೇ ಇದ್ದಲ್ಲಿ ಮೊಗವೀರಪಟ್ನದ ಯುವಕರೆಲ್ಲರೂ ಒಗ್ಗೂಡಿ ಉಗ್ರ ಹೋರಾಟದ ಜತೆಗೆ, ತಾವೇ ಟ್ಯಾಂಕ್ ತೆರವುಗೊಳಿಸುತ್ತೇವೆ ಎಂದು ಉಳ್ಳಾಲ ಮೊಗವೀರಪಟ್ನದ ನಾಗರಿಕರು ಉಳ್ಳಾಲ ಸಮುದ್ರ ತೀರದಲ್ಲಿ ಉಳ್ಳಾಲ ನಗರಸಭೆಯಿಂದ ನಿರ್ಮಿಸಲಾಗಿರುವ ತ್ಯಾಜ್ಯ ಶೇಖರಣಾ ಟ್ಯಾಂಕ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳ್ಳಾಲವೆಂದಲ್ಲಿ ಧಾರ್ಮಿಕ ಸ್ಥಳಗಳಿರುವ ಪ್ರದೇಶ. ಪ್ರವಾಸಿಗರು ಬರುವಂತಹ ಜಾಗ ಉಳ್ಳಾಲ ಸಮುದ್ರ ತೀರ. ಆದರೆ ಅದೇ ಭಾಗದಲ್ಲಿ ಅಕ್ರಮವಾಗಿ ಟ್ಯಾಂಕ್ ನಿರ್ಮಿಸುವ ಕಾಮಗಾರಿ ನಡೆಸಲಾಗಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಕ್ರಮದ ಕುರಿತು ಒಪ್ಪಿಕೊಂಡಿದ್ದು, ಸ್ಥಳಾಂತರಗೊಳಿಸುವ ಕುರಿತು ತಿಳಿಸಿದ್ದಾರೆ. ಆದರೆ ಈವರೆಗೂ ಅದು ಈಡೇರಿಲ್ಲ. ಜೊತೆಗೆ ಅದೇ ಸ್ಥಳದಲ್ಲಿ ಕಸದ ವಿಲೇವಾರಿ ಮಾಡಲು ವಾಹನ ನಿಲ್ಲುತ್ತದೆ. ಪ್ರದೇಶವಿಡೀ ಕಸದ ರಾಶಿಯೇ ತುಂಬಿರುತ್ತದೆ. ಉಳ್ಳಾಲ ಪ್ರದೇಶದ ವಸತಿ ಕಟ್ಟಡ, ಅಂಗಡಿಗಳ , ಮನೆಗಳಿಂದ ಬರುವ ಶೌಚಾಲಯ, ಸ್ನಾನಗೃಹ ತ್ಯಾಜ್ಯ ನೀರನ್ನು ಟ್ಯಾಂಕಿನಲ್ಲಿ ಶೇಖರಿಸಿಡಲಾಗುತ್ತಿದೆ. ಮಳೆಗಾಲದಲ್ಲಿ ಟ್ಯಾಂಕ್ ತುಂಬಿ ತ್ಯಾಜ್ಯ ನೀರಿಡೀ ರಸ್ತೆಯಲ್ಲಿ, ಮನೆಗಳ ಆವರಣದಲ್ಲಿ ಹರಿದು ಅನಾರೋಗ್ಯದ ವಾತಾವರಣ ನಿರ್ಮಾಣ ಮಾಡಿದೆ. ಪ್ರದೇಶದಾದ್ಯಂತ ಸೊಳ್ಳೆ ಕಾಟ, ಇಲ್ಲಿನ ಮನೆಮಂದಿಯಲ್ಲಿ ಮೈತುರಿತ, ಜ್ವರ, ಶೀತ, ಕೆಮ್ಮು ಲಕ್ಷಣಗಳು ಬಹಳಷ್ಟು ಎದ್ದು ಕಾಣುತ್ತಿವೆ. ಸಮುದ್ರ ತೀರದಲ್ಲಿ ಎಲ್ಲಿಯೂ ಇಂತಹ ಅವ್ಯವಸ್ಥೆಯಿಲ್ಲ . ಒಂದು ವಾರದ ಒಳಗೆ ಟ್ಯಾಂಕ್ ತೆರವುಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಟ್ಯಾಂಕನ್ನು ತಾವಾಗಿಯೇ ತೆರವುಗೊಳಿಸುತ್ತೇವೆ, ಅನಾಹುತಗಳು ಸಂಭವಿಸಿದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದು ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಆರೋಪಿಸಿದರು.
ಉಳ್ಳಾಲ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬು ಬಂಗೇರ ಮಾತನಾಡಿ, ಪ್ರದೇಶದ ಶಾಸಕರು ತಮ್ಮ ಮತದಾರರ ಭಾಗದಲ್ಲಿ ಮಾತ್ರ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಮೊಗವೀರಪಟ್ನ, ಉಳ್ಳಾಲ ಸಮುದ್ರ ತೀರದ ಸಮಸ್ಯೆ ಬಗ್ಗೆ ಗಮನವೇ ಹರಿಸಿಲ್ಲ. ಟ್ಯಾಂಕ್ ವಿಚಾರ ಸ್ಥಳೀಯ ಯುವಕರು ಕೆರಳುವಂತಹ ವಿಚಾರವಾಗಿದೆ. ಎಂಟು ವರ್ಷಗಳಿಂದ ಉಳ್ಳಾಲದ ತ್ಯಾಜ್ಯ ನೀರು ಟ್ಯಾಂಕಿಗೆ ಬಿಡುವ ಕೆಲಸವಾಗುತ್ತಿದೆ. ಈ ಬಗ್ಗೆ ಹಲವು ಮನವಿಗಳ ಬಳಿಕ ಇತ್ತೀಚೆಗೆ ನಡೆದ ಅಬ್ಬಕ್ಕ ಉತ್ಸವದ ಸಂದರ್ಭ ಅಬ್ಬಕ್ಕ ವೃತ್ತದಿಂದ ಉಳಿಯ ಮೂಲಕ ತ್ಯಾಜ್ಯನೀರು ಹೋಗುವಂತೆ ಇರುವ ತೋಡು ಸರಿಪಡಿಸಿ, ಅಲ್ಲಿಂದಲೇ ತ್ಯಾಜ್ಯ ನೀರು ತೆರಳುವಂತೆ ಮಾಡುವುದಾಗಿ ಲೋಕೋಪಯೋಗಿ ಅಧಿಕಾರಿ ವಿಶ್ವಾಸ ನೀಡಿದ್ದರು. ಈವರೆಗೂ ಅದು ಈಡೇರಿಕೆಯಾಗಿಲ್ಲ. ಒಂದು ವಾರದೊಳಗೆ ಸರಿಯಾಗದೇ ಇದ್ದಲ್ಲಿ, ಹಿಂಸಾತ್ಮಕ ವಾತಾವರಣಕ್ಕೆ ಸ್ಥಳೀಯಾಡಳಿತವೇ ಅವಕಾಶ ಮಾಡಿಕೊಟ್ಟಂತಾಗುವುದು ಎಂದರು. ಮೊಗವೀರ ಶಾಲಾ ಸಂಚಾಲಕ ಯಶವಂತ ಅಮೀನ್ ಮಾತನಾಡಿ, ಸ್ವಚ್ಛತೆ ಹೆಸರಿನಲ್ಲಿ ಸ್ಥಳೀಯಾಡಳಿತ ಸರಕಾರದ ಕೋಟ್ಯಂತರ ಹಣವನ್ನು ಲೂಟಿಗೈಯ್ಯುತ್ತಿದೆ. ಮನವಿ ನೀಡಿರುವ 150 ಫೈಲುಗಳು ನಗರಸಭೆಯಲ್ಲಿವೆ. ಈವರೆಗೂ ಟ್ಯಾಂಕ್ ಕುರಿತು ಕ್ರಮವಿಲ್ಲ. ಒಂದು ಕಡೆಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ, ವಸತಿ ಕಟ್ಟಡಗಳಿಗೆ ಅನುಮತಿ ನೀಡಲಾಗುತ್ತಿದೆ. ಅವರಿಗೆ ಚರಂಡಿ ವ್ಯವಸ್ಥೆಯಿಲ್ಲದೆ ಜನವಸತಿ ಪ್ರದೇಶಕ್ಕೆ ಬಿಡುವಂತಹ ವ್ಯವಸ್ಥೆ ನಗರಸಭೆಯಿಂದ ಆಗುತ್ತಿದೆ. ಪ್ರದೇಶವಿಡೀ ದುರ್ನಾತ ಬೀರುವುದರಿಂದ ಪ್ರವಾಸಿಗರೂ ಮೂಗುಮುಚ್ಚಿಕೊಂಡೇ ಬರುವಂತಾಗಿದೆ. ವಾರದೊಳಕ್ಕೆ ಪರಿಹಾರ ಸಿಗದೇ ಇದ್ದಲ್ಲಿ ಬಂದ್ ಗೊಳಿಸುವ ಖಂಡಿತಾ ಎಂದು ಎಚ್ಚರಿಸಿದರು.
ಸ್ಥಳೀಯ ನಗರಸಭೆ ಸದಸ್ಯ ಬಶೀರ್ ಕೋಟೆಪುರ ಮಾತನಾಡಿ ಹತ್ತು ತಿಂಗಳಿನಿಂದ ಉಳ್ಳಾಲ ನಗರಸಭೆಗೆ ಮನವಿಯನ್ನು ಮಾಡುತ್ತಲೇ ಬಂದಿದ್ದೇನೆ, ಪ್ರವಾಸಿಗರಿಂದಲೂ ಹಲವು ದೂರುಗಳು ಬಂದಿರುವುದನ್ನು ನಗರಸಭೆಯ ಗಮನಕ್ಕೆ ತರಲಾಗಿದೆ. ಆದರೆ ಟ್ಯಾಂಕ್ ಸ್ಥಳಾಂತರಗೊಳಿಸಲು ರೂ. 40 ಲಕ್ಷ ಬೇಕಾಗಿದೆ. ಅದು ಸರಕಾರದಿಂದ ಸಿಗುತ್ತಿಲ್ಲ. ಇದರಿಂದ ಪ್ರಕ್ರಿಯೆ ಅಸಾಧ್ಯವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಮ್ಮಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ. ಸ್ಥಳದಲ್ಲಿ ನಗರಸಭೆ ಸದಸ್ಯೆ ಮಮತಾ ರಾಘವ್, ರಾಜೇಶ್ ಬಂಗೇರ, ಸುನೀಲ್, ಈಜುಗಾರರ ಸಂಘದ ಅಧ್ಯಕ್ಷ ಮೋಹನ್ ಪುತ್ರನ್, ಸುಧೀರ್ ಸುವರ್ಣ ಮುಂತಾದವರು ಇದ್ದರು.