UN NETWORKS
ಪಾನೀರ್ : ವಿದ್ಯಾರ್ಥಿಗಳಿಗೆ ಸರ್ಕಾರಿ ಸವಲತ್ತು ಪಡೆಯಲು ಆನ್ ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು ಜಾಗರೂಕತೆಯಿಂದ ಭರ್ತಿ ಮಾಡಬೇಕು, ಅರ್ಜಿ ಕಾಲಂನಲ್ಲಿ ಟ್ಯೂಶನ್ ಶುಲ್ಕ ಹಾಕಬೇಕಿದ್ದು ಆ ಹಣ ಸ್ಕಾಲರ್ ಶಿಪ್ ಮೂಲಕ ಸಿಗಲಿದೆ ಎಂದು ಮಂಗಳೂರು ತಾಲೂಕು ಮಾಹಿತಿ ಕೇಂದ್ರದ ಸಂಯೋಜಕ ನಝೀರ್ ಅಭಿಪ್ರಾಯಪಟ್ಟರು.
ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ಭಾನುವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಸರ್ಕಾರಿ ಸವಲತ್ತುಗಳ ಮಾಹಿತಿ ಹಾಗೂ ಸಸಿ ವಿತರಣಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅಲ್ಪಸಂಖ್ಯಾತ ಇಲಾಖೆಯಿಂದಲೇ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳಿದ್ದು ಹತ್ತು ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸಿಇಟಿ, ನೀಟ್ ತರಬೇತಿಯೂ ಉಚಿತವಾಗಿ ನೀಡುವ ವ್ಯವಸ್ಥೆಯಿದ್ದು ಹತ್ತು ಸಾವಿರ ಮೌಲ್ಯದ ಪುಸ್ತಕ ಉಚಿತವಾಗಿ ನೀಡಲಾಗುತ್ತದೆ. ಪಿಎಚ್ ಡಿ ಮತ್ತು ಎಂಫಿಲ್ ಮಾಡುವವರಿಗೆ 25 ಸಾವಿರ, ಹೊರದೇಶದಲ್ಲಿ ಕಲಿಯಲು ಬಯಸುವವರಿಗೆ ಎರಡು ವರ್ಷಕ್ಕೆ ಹತ್ತು ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ತಿಳಿಸಿದರು.
ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ಸವಲತ್ತುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಥೊಲಿಕ್ ಸಭಾ ಸರ್ಕಾರದ ಸವಲತ್ತುಗಳ ಬಗ್ಗೆ ನಿರಂತರ ಮಾಹಿತಿ ನೀಡುತ್ತಾ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕವೂ ಪ್ರಚಾರ ಮಾಡಲಾಗುತ್ತಿದ್ದು ಪ್ರಯೋಜನ ಪಡೆದಾಗ ನಮ್ಮ ಪ್ರಯತ್ನ ಸಾರ್ಥಕ ಎನಿಸುತ್ತದೆ ಎಂದರು. ಪಾನೀರ್ ಮರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್, ಕಾರ್ಯಕ್ರಮ ಪ್ರಯೋಜಕರಾದ ಅಮಿತ್ ನೊರೊನ್ಹ, ರೆನ್ನಿ ಲೋಬೋ, ಬ್ರದರ್ ಜೈಸನ್ ಕುಟಿನ್ಹಾ ಮುಖ್ಯ ಅತಿಥಿಗಳಾಗಿದ್ದರು. ಕೆಥೊಲಿಕ್ ಸಭಾ ಸಂಚಾಲಕ ಆಲ್ವಿನ್ ಡಿಸೋಜ ಸ್ವಾಗತಿಸಿದರು. ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರುವಿತಾ ಮಿನೇಜಸ್ ವಂದಿಸಿದರು. ವಿನ್ನಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
`ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಕ್ರೈಸ್ತ ಸಮುದಾಯ ಹಿಂದುಳಿದಿದೆ, ಕೆಥೊಲಿಕ್ ಸಭಾ 30ನೇ ವರ್ಷದಲ್ಲಿದ್ದು 30 ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವೂ ಒಂದಾಗಿದ್ದು ಮಾಹಿತಿ ಪಡೆದ ಬಳಿಕ ಕನಿಷ್ಠ 30 ಜನರಾದರೂ ಪ್ರಯೋಜನ ಪಡೆಯುವಂತಾಗಲಿ’.
ಫಾ.ಡೆನ್ನಿಸ್ ಸುವಾರಿಸ್, ಇಗರ್ಜಿಯ ಧರ್ಮಗುರು