UN NETWORKS
ಕೋಟೆಕಾರ್ : ಮದರಸ ಎನ್ನುವುದು ಧಾರ್ಮಿಕ ವಿದ್ಯೆ ನೀಡುವ ಕೇಂದ್ರವಾಗಿದ್ದು ಹೆಣ್ಣು, ಗಂಡು ಎನ್ನುವ ಭೇದವಿಲ್ಲ. ಎಷ್ಟೇ ದೊಡ್ಡ ಧಾರ್ಮಿಕ ಶಿಕ್ಷಣ ಪಡೆದವನಾದರೂ ಆತನಿಗೆ ಮದರಸ ಶಿಕ್ಷಣ ಅನಿವಾರ್ಯ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಳ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅಭಿಪ್ರಾಯಪಟ್ಟರು.
ಕೋಟೆಕಾರ್ ಗ್ರಾಮದ ಹಿದಾಯತ್ ನಗರದಲ್ಲಿರುವ ಹಿಹ್ಸಾನುಲ್ ವಹ್ಹಾಬ್ ಅಲ್ ಮದರಸತುಲ್ ಹಿದಾಯ ಇದರ ಮೇಲಂತಸ್ತು ಉದ್ಘಾಟನಾ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಲೌಕಿಕ ವಿದ್ಯೆ ಎನ್ನುವುದು ಭೂಲೋಕದಲ್ಲಿ ಅತ್ಯಗತ್ಯ. ಇದರಿಂದ ಜೀವನಕ್ಕೆ ಕೆಲಸ ದೊರಕಬಹುದು. ಅದೇ ರೀತಿ ಧಾರ್ಮಿಕ ವಿದ್ಯೆಯೂ ಮುಖ್ಯ. ಈ ವಿದ್ಯೆಯಿಂದ ಮನುಷ್ಯನ ಜೀವನ ಪಾಠ ಸಿಗುತ್ತದೆ. ಧಾರ್ಮಿಕ ವಿದ್ಯೆ ಪಡೆಯದವರು ಸುಸಂಸ್ಕೃತ ಜೀವನ ನಡೆಸಲಾಗದು. ವಿದ್ಯೆ ಪಡೆದರೆ ಸಾಲದು, ಅದಕ್ಕೆ ತಕ್ಕಂತೆ ಜೀವನ ಸಾಗಿಸುವುದು ಮುಖ್ಯ ಎಂದು ಹೇಳಿದರು. ಎಸ್ ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡು ಮಾತನಾಡಿ, ಹಿದಾಯತ್ ನಗರ ಮದರಸ ಮತ್ತು ಮಸೀದಿಯ ವಿಸ್ತರಣೆ ಸಂದರ್ಭ ದಾನಿಗಳು ಹೆಸರು, ಅಧಿಕಾರಕ್ಕಾಗಿ ಹಾತೊರೆಯದೆ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಇಂತಹ ದಾನ ದೇವನ ಮುಂದೆ ಸ್ವೀಕಾರಾರ್ಹವಾಗಿದೆ ಎಂದರು.
ಮದರಸ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಮಸೀದಿಯ ಖತೀದ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ, ಮುಅಲ್ಲಿಂ ಅಶ್ರಫ್ ಅಮ್ಜದಿ, ಎಸ್ಎಂಎ ಅಧ್ಯಕ್ಷ ಅಬ್ಬಾಸ್, ಇನ್ ತಾಯಿ, ಮಸೀದಿಯ ಕಾರ್ಯದರ್ಶಿ ಝಾಕೀರ್ ಎಸ್. ಮೊದಲಾದವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಯು.ಎ.ಅಬ್ದುಲ್ ಅಝೀಝ್ ಸಖಾಫಿ ಸ್ವಾಗತಿಸಿದರು.