Site icon Ullalavani

ಗ್ರಾಮಚಾವಡಿ: ಮದ್ಯದಂಗಡಿ ಮುಚ್ಚಲು ಒತ್ತಾಯಿಸಿ ನಾಗರಿಕರಿಂದ ಪ್ರತಿಭಟನೆ, ಮುತ್ತಿಗೆ

UN NETWORKS

ಗ್ರಾಮಚಾವಡಿ : ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಚಾವಡಿ ಬಳಿ ನೂತನವಾಗಿ ಆರಂಭಿಸಲಾದ ಮದ್ಯದಂಗಡಿಯನ್ನು ಕೂಡಲೇ ಬಂದ್ ಗೊಳಿಸುವಂತೆ ಆಗ್ರಹಿಸಿ ಹರೇಕಳ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಝಾಹಿದ್ ಮಲಾರ್ ಗ್ರಾಮಚಾವಡಿ ಪ್ರದೇಶವು ಮೂರು ಗ್ರಾಮ, ಎರಡು ತಾಲೂಕುಗಳನ್ನು ಸಂಪರ್ಕಿಸುವ ಪ್ರದೇಶವಾಗಿದೆ. ಇಲ್ಲಿಯ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಮದ್ಯದಂಗಡಿ ಆರಂಭಗೊಂಡಿರುವ ಕಟ್ಟಡದಲ್ಲಿ ಶಿಕ್ಷಣ ಸಂಸ್ಥೆಯೂ ಇದೆ. ಅಬಕಾರಿ ಇಲಾಖೆಯ ಷಡ್ಯಂತ್ರದೊಂದಿಗೆ ಇಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಲಾಗಿದ್ದು, ಕೂಡಲೇ ಮದ್ಯದಂಗಡಿಯನ್ನು ಬಂದ್ ಗೊಳಿಸದಿದ್ದರೆ ನಾವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.ರಫೀಕ್ ಮಾತನಾಡಿ ಸ್ಥಳೀಯ ಗ್ರಾಮ ಪಂಚಾಯತಿಯ ಪರವಾನಿಗೆಯನ್ನು ಪಡೆಯದೇ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದೆ. ಇದರ ಪಕ್ಕದಲ್ಲೇ ಶಾಲೆ , ಮಹಿಳಾ ಹೊಲಿಗೆ ತರಬೇತಿ ಕೇಂದ್ರ , ಧಾರ್ಮಿಕ ಕೇಂದ್ರಗಳು ಹಾಗೂ ಜನವಸತಿ ಪ್ರದೇಶ ಇರುವುದರಿಂದ ಮುಂದೆ ಬಹಳಷ್ಟು ಸಮಸ್ಯೆಗಳು ಉದ್ಬವಿಸಲಿವೆ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿವೆ ಎಂದರು.ಹರೇಕಳದಲ್ಲಿ ಹೆಚ್ಚಾಗಿ ಕೂಲಿ ಕೆಲಸ ಮಾಡಿ ಬದುಕುವ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿರುವುದರಿಂದ ಮುಂದೆ ಅವರು ಮದ್ಯದ ದಾಸ್ಯಕ್ಕೆ ತುತ್ತಾಗಿ ಕುಟುಂಬ ಸಹಿತ ಬೀದಿಪಾಲಾಗುವ ಭಯವು ಮಹಿಳೆಯರನ್ನು ಕಾಡತೊಡಗಿದೆ. ಅಲ್ಲದೆ ಶಿಕ್ಷಣ ಕೇಂದ್ರಗಳ ಬಳಿ ಮದ್ಯದಂಗಡಿ ತೆರೆಯಬಾರದೆಂಬ ಕಾನೂನು ಇದ್ದರೂ ಅದೆಲ್ಲವನ್ನ ಗಾಳಿಗೆ ತೂರಿ ಅನಧಿಕೃತವಾಗಿ ಮದ್ಯದಂಗಡಿ ಪ್ರಾರಂಭಗೊಂಡಿರುತ್ತದೆ. ಅದನ್ನು ಮುಚ್ಚಲೇ ಬೇಕು ಎಂದು ಒತ್ತಾಯಿಸಿದರು.

ಬಳಿಕ ಸಮಿತಿಯ ಸದಸ್ಯರು ಹರೇಕಳ‌ ಗ್ರಾಮ ಪಂಚಾಯಿತಿ‌ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಪೊಲೀಸರು ಬಂದೋ‌ಬಸ್ತ್ ಏರ್ಪಡಿಸಲಾಗಿದ್ದರೂ ಒಂದು ಹಂತದಲ್ಲಿ‌ ಆಕ್ರೋಶಿತ ನಾಗರಿಕರು ಮದ್ಯದಂಗಡಿಗೆ ಮುತ್ತಿಗೆ ಹಾಕಿ‌ ಬೀಗ ಹಾಕಿದರು.ಈ ಸಂದರ್ಭದಲ್ಲಿ ರಫೀಕ್ ಹರೇಕಳ, ಬಶೀರ್ ಬಿ.ಎಂ, ನೌಫಲ್, ಶಾಹುಲ್ ಹಮೀದ್, ಮುನೀರ್. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಸ್ಥಳದಲ್ಲಿ ಕೊಣಾಜೆ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ‌ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version