Site icon Ullalavani

ಟ್ರಾಫಿಕ್ ಪೇದೆಗೆ ಬೈಕ್ ಸವಾರರಿಂದ ಹಲ್ಲೆ ಓರ್ವ ಬಂಧನ-ಇನ್ನೋರ್ವ ಪರಾರಿ

UN NETWORKS

ತೊಕ್ಕೊಟ್ಟು : ರಸ್ತೆ ನಿಯಮ ಉಲ್ಲಂಘಿಸಿ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿ ಸವಾರನ ಫೋಟೊ ತೆಗೆದ ಸಂಚಾರಿ ಪೊಲೀಸ್ ಪೇದೆ ಮೇಲೆ ಬೈಕ್ ಸವಾರರಿಬ್ಬರು ಹಲ್ಲೆ ನಡೆಸಿರುವ ಘಟನೆ ತೊಕ್ಕೊಟ್ಟು ಹೊಸ ಬಸ್ಸು ನಿಲ್ದಾಣದ ಹೊರಗಡೆ ಶುಕ್ರವಾರ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಸವಾರನನ್ನು ಬಂಧಿಸಿದ್ದು, ಸಹಸವಾರ ತಲೆಮರೆಸಿಕೊಂಡಿದ್ದಾನೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಪೇದೆ ಸಂಗಣ್ಣ ಗೌಡ ಹಲ್ಲೆಗೊಳಗಾದವರು. ಮದನಿ ನಗರ ಮಸೀದಿ ಸಮೀಪ ಜ್ಯೋತಿ ಫ್ಲ್ಯಾಟ್ ನಿವಾಸಿ ಮಹಮ್ಮದ್ ಅಝರುದ್ದೀನ್ (32) ಬಂಧಿತ. ಸಹಸವಾರ ರಿಯಾಝ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಅಝರುದ್ದೀನ್ ಮತ್ತು ರಿಯಾಝ್ ಹೆಲ್ಮೆಟ್ ಧರಿಸದೆ, ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದರು. ಇದನ್ನು ಗಮನಿಸಿದ ತೊಕ್ಕೊಟ್ಟುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಸಂಗಣ್ಣ ಗೌಡ ಅವರು ಮೊಬೈಲ್ ಮೂಲಕ ಫೋಟೊ ತೆಗೆದಿದ್ದರು. ಇದರಿಂದ ಕುಪಿತಗೊಂಡ ಸವಾರರಿಬ್ಬರು ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ , ಪೇದೆಯ ಎಡಕೆನ್ನೆ, ಎದೆಯ ಭಾಗಕ್ಕೆ ಕೈಯಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಕೈಕಾಲು ಮುರಿದು ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾರೆ. ಘಟನೆಯಿಂದ ಗಾಯಗೊಂಡ ಪೇದೆ ಸಂಗಣ್ಣ ಗೌಡ ಅವರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸೆಕ್ಷನ್ 353, ಅವಾಚ್ಯ ಶಬ್ದಗಳಿಂದ ನಿಂದನೆ 504 , ಹಲ್ಲೆ 323 , 506 ಕೊಲೆ ಬೆದರಿಕೆ ಮತ್ತು ಗಾಯ 332 ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ ವೇಳೆ ಆರೋಪಿ ಅಝರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸಹಸವಾರ ರಿಯಾಜ್ ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Exit mobile version