UN NETWORKS
ಯೆನೆಪೋಯ: ಯೋಗ ಕುರಿತು ಒಂದು ಕಾಲದಲ್ಲಿ ಬಹಳಷ್ಟು ತಪ್ಪು ತಿಳುವಳಿಕೆಗಳು ಇದ್ದವು. ಅದೊಂದು ಧಾರ್ಮಿಕ ಸಂಬಂಧಿಸಿದ ವಿಚಾರವಲ್ಲ , ಜೀವನದ ಅವಶ್ಯ ಅಂಗ ಅನ್ನುವುದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಾದ ಬಳಿಕ ಅರಿವು ಮೂಡಿದೆ ಎಂದು ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯಗಳ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಅವರು ಯೆನೆಪೋಯ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆಯ ಪ್ರಯುಕ್ತ ಮ್ಯಾರಥಾನ್ (ದೀರ್ಘಕಾಲದ) ಯೋಗ ಬೋಧನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಿಂದ ವಿಶ್ವದ 170 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಮಾನಸಿಕ ಒತ್ತಡಗಳಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವಿಕೆಗೆ ಯೋಗಾಭ್ಯಾಸ ಪರಿಣಾಮಕಾರಿ ಅನ್ನುವುದು ಸಾಬೀತಾದ ವಿಚಾರ. ನಿರಂತರ ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲೂ ಬದಲಾವಣೆಗಳಾಗುತ್ತವೆ. ಈ ಮೂಲಕ ದುರಾಭ್ಯಾಸಗಳನ್ನು ದೂರವಾಗಿಸಲು ಸಾಧ್ಯ ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳು ಸೇರಿ ಜಂಟಿಯಾಗಿ ಆರೋಗ್ಯ ಸುಧಾರಣೆ ಕಾರ್ಯಕ್ರಮಗಳನ್ನು ನಡೆಸಿದಾಗ ಆರೋಗ್ಯ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಲು ಸಾಧ್ಯ. ಸದ್ಯ ಪರಿಸ್ಥಿತಿಗಳಲ್ಲಿ ಜೀವ ಮತ್ತು ಮನಸ್ಸಿನ ಜತೆಗಿನ ನಂಟು ಜನರಲ್ಲಿ ಬಹಳಷ್ಟು ದೂರವಿರುತ್ತದೆ. ಈ ನಿಟ್ಟಿನಲ್ಲಿ ಜೀವ ಮತ್ತು ಮನಸ್ಸನ್ನು ಒಗ್ಗೂಡಿಸಲು ಯೋಗ ಸಹಕಾರಿ. ಆಸ್ಪತ್ರೆಗಳಲ್ಲಿ ಯೋಗ ಚಿಕಿತ್ಸೆಯಿಂದ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರು. ಕಾರ್ಯಕ್ರಮವನ್ನು ನಾಸ್ರೀನ್ ಯೆನೆಪೋಯ ಉದ್ಘಾಟಿಸಿದರು. ಜೆಪ್ಪು ಯೆನೆಪೋಯ ಶಾಲೆಯ ನಿರ್ದೇಶಕಿ ಮಿಸ್ರಿಯಾ ಜಾವೇದ್ ಮುಖ್ಯ ಅತಿಥಿಯಾಗಿದ್ದರು. ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ ವಿಜಯಕುಮಾರ್, ಯೆನೆಪೋಯ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ್ ಉಪಸ್ಥಿತರಿದ್ದರು
ಡಾ.ಗ್ರೀಷ್ಮಾ ಮತ್ತು ಡಾ.ಪದ್ಮಿನಿ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಯೋಗ ತರಬೇತುದಾರ ಕುಶಾಲಪ್ಪ ಗೌಡ ವಂದಿಸಿದರು.
1,000 ಶಿಬಿರಾರ್ಥಿಗಳಿಂದ 15 ಗಂಟೆ ಮ್ಯಾರಥಾನ್ ಯೋಗ :
ಯೆನೆಪೋಯ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯ ದಲ್ಲಿ 15 ಗಂಟೆಗಳ ಸುದೀರ್ಘ ಮ್ಯಾರಥಾನ್ ಯೋಗ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಂಡು ಸಂಜೆ 8 ಗಂಟೆಯವರೆಗೆ ನಡೆಯಿತು. ಒಂದೂವರೆ ಗಂಟೆ ಅವಧಿಯ ತರಬೇತಿಯಲ್ಲಿ ಪ್ರತಿ ವಿಭಾಗಕ್ಕೆ 100 ಮಂದಿಯನ್ನು ಒಳಪಡಿಸಿ ಒಟ್ಟು 1,000 ಮಂದಿಗೆ ತರಬೇತಿ ನೀಡಲಾಯಿತು. ಯೆನೆಪೋಯ ವೈದ್ಯಕೀಯ ಕಾಲೇಜು ಒಳಾಂಗಣ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸ, ಆಯುಷ್ ಬಿಡುಗಡೆಗೊಳಿಸಿದ ಯೋಗಾಭ್ಯಾಸದ ಶಿಷ್ಟಾಚಾರದಂತೆ ತರಬೇತಿ ನಡೆಯಿತು. ದೇಶದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ ಪ್ರಥಮ ಪ್ರಯತ್ನ ಆಗಿದೆ. ಪ್ರತಿ ಶಿಬಿರಾರ್ಥಿಗೆ ಒಂದೂವರೆ ಗಂಟೆ ಅವಧಿಯಲ್ಲಿ ಯೋಗಾಭ್ಯಾಸದ ಕ್ರಿಯೆ, ಯೋಗಾಸನ, ಪ್ರಾಣಾಯಾಮ, ವಿಶ್ರಾಂತಿ ಹಾಗೂ ಧ್ಯಾನ ತರಬೇತಿಯೊಂದಿಗೆ ಯೋಗ ಸಿದ್ಧಾಂತದ ತರಗತಿ ನೀಡಲಾಯಿತು. ಉಚಿತವಾಗಿ ನಡೆದ ಪ್ರವೇಶಾತಿಯಲ್ಲಿ ತರಬೇತಿ ಮುಂದುವರಿಸುವ ಸಲುವಾಗಿ ಉಚಿತ ಮಾಹಿತಿ ಕೈಪಿಡಿ ಪುಸ್ತಕವನ್ನು ನೀಡಲಾಯಿತು. ಆವಿಷ್ಕಾರ ಯೋಗ ಕೇಂದ್ರವನ್ನು ನಡೆಸುತ್ತಿರುವ ಕುಶಾಲಪ್ಪ ಗೌಡ.ಎನ್ ಇವರು ಯೋಗ ತರಬೇತಿಯನ್ನು ನೀಡಿದರು. ಯೆನೆಪೋಯ ಸಂಶೋಧನಾ ಕೇಂದ್ರದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಯೋಗ ಚಿಕಿತ್ಸೆ ನೀಡಿ ರೋಗಿಯ ರೋಗ ನಿರೋಧಕ ಶಕ್ತಿ ಹಾಗೂ ಜೀವರಸಾಯನದಲ್ಲಿ ಆಗುವ ಪರಿವರ್ತನೆಯ ಬಗ್ಗೆ ಸಂಶೋಧನೆಯಲ್ಲೂ ತೊಡಗಿಕೊಂಡಿದ್ದಾರೆ.