UN NETWORKS
ಮಂಗಳೂರು : ಖ್ಯಾತ ದಂತ ವೈದ್ಯ ಬಾಯಿ ಮುಖ ಶಸ್ತ್ರಚಿಕಿತ್ಸಕ ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರ 6ನೇ ಪುಸ್ತಕ “ಸಂಜೀವಿನಿ’ ಭಾಗ ಎರಡು, ಆರೋಗ್ಯ ಮಾರ್ಗದರ್ಶಿ, ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯಿಂದ ನೀಡಲಾಗುವ 2018ನೇ ಸಾಲಿನ ವೈದ್ಯಕೀಯ ವಿಷಯದ ವಿಭಾಗದಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಜುಲೈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿರುವ ಕಚೇರಿಯಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. 25ಸವಿರ ರೂ. ನಗದು, ಪ್ರಶಸ್ತಿ, ಪಾರಿತೋಷಕ ಮತ್ತು ಅಭಿನಂದನಾ ಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ವೈದ್ಯಕೀಯ ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವಿರುವ ವೈದ್ಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಡಾ. ಮುರಲೀ ಮೋಹನ್ ಚೂಂತಾರು ಅವರು ವೈದ್ಯಕೀಯ ಲೇಖಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು ಈವರೆಗೆ ರಕ್ತದಾನ ಜೀವದಾನ, ಕಚಗುಳಿ, ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ- ಭಾಗ ಒಂದು, ಚಿತ್ರಾನ್ನ 32 ದಂತ ಕತೆಗಳು, ಸಂಜೀವಿನಿ- ಭಾಗ ಎರಡು, ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ, ಸಂಗಾತಿ ಜ್ವರ ಸಂಹಿತೆ ಎಂಬ ಎಂಟು ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ.
ಅವರ 9ನೇ ಪುಸ್ತಕ ಧನ್ವಂತರಿ ವೈದ್ಯಕೀಯ ಲೇಖನಗಳ ಸಂಗ್ರಹ ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಡಾ. ಮುರಲೀಯವರು ಕಳೆದ 22ವರ್ಷಗಳಿಂದ ಹೊಸಂಗಡಿಯಲ್ಲಿ ದಂತ ವೈದ್ಯಕೀಯ ಚಿಕಿತ್ಸಾಲಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾಗಿಯೂ 2015ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಖ್ಯಾತ ತೇಜಸ್ವಿನಿ ಆಸ್ಪತ್ರೆಯಲ್ಲಿ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಾಗಿ ಕಳೆದ ಮೂರು ವರ್ಷಗಳಿಂದ ರೋಗಿಗಳ ಸೇವೆ ಮಾಡುತ್ತಿದ್ದಾರೆ.