Site icon Ullalavani

ಪಾನೀರ್ ಇಗರ್ಜಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

UN NETWORKS

ಪಾನೀರ್: ವಿನಾಯಿತಿ ಪತ್ರ ಕೇಳುವುದು ಭಿಕ್ಷೆ ಬೇಡುವುದಕ್ಕೆ ಸಮ. ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆಗೆ ಪ್ರತಿಯಾಗಿ ನಮ್ಮ ಹಕ್ಕು ಕೇಳಿ ಪಡೆಯುವ ಮೂಲಕ ಸರ್ಕಾರದ ಸವಲತ್ತು ಪೂರ್ಣ ಪ್ರಮಾಣದಲ್ಲಿ ಪಡೆಯುವ ಪ್ರಯತ್ನ ಅಗತ್ಯ ಎಂದು ಬಿಷಪ್ ಹೌಸ್‍ನ ಅತಿಥಿ ಧರ್ಮಗುರು ಫಾ.ಮ್ಯಾಕ್ಸ್ಮಿಂ ರೊಜಾರಿಯೋ ಅಭಿಪ್ರಾಯಪಟ್ಟರು.

ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ಭಾನುವಾರ ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರೈಸ್ತರು ಈ ವಿಷಯದಲ್ಲಿ ನಿರ್ಲಕ್ಷ್ಯ ಭಾವನೆ ಹೊಂದಿರುವುದರಿಂದ ಕಳೆದ ವರ್ಷ ಶೇ.8.7 ಸ್ಕಾಲರ್ಶಿಪ್ ಮಾತ್ರ ಸಿಕ್ಕಿದೆ. ಈ ಬಗ್ಗೆ ಕೆಥೊಲಿಕ್ ಸಭಾ ಜಾಗೃತಿ ಮೂಡಿಸುತ್ತಿದ್ದು ಇದರ ಪ್ರಯೋಜನ ಮುಂದಿನ ದಿನಗಳಲ್ಲಾದರೂ ಸಮುದಾಯಕ್ಕೆ ಸಿಗುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್, ಬರೇಲಿ ಡಯಾಸಿಸ್ ಧರ್ಮಗುರು ಫಾ.ನವೀನ್ ಡಿಸೋಜ, ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಕಾರ್ಯದರ್ಶಿ ರುವಿತಾ ಮೆನೇಜಸ್ ಮೊದಲಾದವರು ಉಪಸ್ಥಿತರಿದ್ದರು.

`ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರೂ ಇದ್ದು, ಅಂತಹ ಕುಟುಂಬಗಳನ್ನು ಗುರುತಿಸಿ ಮನೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಮುಂದುವರಿವರು ಪ್ರಯತ್ನಿಸುವ ಮೂಲಕ ಅಭಿವೃದ್ಧಿಗಾಗಿ ಕೈಜೋಡಿಸಬೇಕು’
ಫಾ.ಮ್ಯಾಕ್ಸ್ಮಿಂ ರೊಜಾರಿಯೋ, ಅತಿಥಿ ಧರ್ಮಗುರು, ಬಿಷಪ್ ಹೌಸ್

.

Exit mobile version